Share this news

ಕಾರ್ಕಳ:ದೇಶವ್ಯಾಪಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆನ್ನುವ ಮಹಾತ್ವಾಕಾಂಕ್ಷೆಯಿAದ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆ ಆರಂಭಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಈ ಯೋಜನೆಯನ್ನು ರಾಜ್ಯದಲ್ಲಿ ಮನೆಮನೆಗೆ ಗಂಗೆ ಎನ್ನುವ ಹೆಸರಿನಲ್ಲಿ ಅನುಷ್ಟಾನಿಸಲಾಗಿತ್ತು. ಆದರೆ ಇಂತಹ ಉತ್ತಮ ಯೋಜನೆ ಕಾರ್ಕಳ ತಾಲೂಕಿನ ಕೆಲವಡೆ ಅಪೂರ್ಣಗೊಂಡಿದ್ದು ನೀರಿನ ಸಂಪರ್ಕವೇ ಇಲ್ಲದೇ ಸಂಪೂರ್ಣವಾಗಿ ಹಳ್ಳ ಹಿಡಿದಿದೆ.

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಕಾಡುಹೊಳೆ ಎಂಬ ಪರಿಸರದಲ್ಲಿ ಜಲಜೀವನ್ ಯೋಜನೆಯಡಿ ಕಾಮಗಾರಿ ಆರಂಭಿಸಿ 2 ವರ್ಷ ಕಳೆದರೂ ಇನ್ನೂ ಕುಡಿಯುವ ನೀರಿನ ಸಂಪರ್ಕವಾಗಿಲ್ಲ.ಈಗಾಗಲೇ ಈ ಕಾಮಗಾರಿಗೆ ಅಧಿಕಾರಿಗಳೇ ಎಳ್ಳುನೀರು ಬಿಟ್ಟಂತೆ ಭಾಸವಾಗಿದ್ದು, ಗುತ್ತಿಗೆದಾರ ಅರೆಬರೆ ಕಾಮಗಾರಿ ಮುಗಿಸಿ ಕಾಲ್ಕಿತ್ತರೂ ಅಧಿಕಾರಿಗಳು ಮಾತ್ರ ಜಾಣಕುರುಡತನ ಪ್ರದರ್ಶಿಸುತ್ತಿರುವುದು ಸಾಕಷ್ಟು ಅನುಮಾಗಳಿಗೆ ಕಾರಣವಾಗಿದೆ.

ಮಳೆ ಕೊರತೆ ಹಿನ್ನೆಲೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸಾಕಷ್ಟು ನೀರಿನ ವ್ಯವಸ್ಥೆ ಇದ್ದರೂ ಸ್ಥಳೀಯ ಮರ್ಣೆ ಪಂಚಾಯತ್ ಟ್ಯಾಂಕರ್ ಮೂಲಕ ಮನೆಮನೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.ಇದು ಪಂಚಾಯತ್ ಆಡಳಿತಕ್ಕೆ ಹೆಚ್ಚುವರಿ ಹೊರೆಯಾಗಿದೆ. ಈಗಾಗಲೇ ಹಲವೆಡೆ ಮೀಟರ್ ರಹಿತ ಟ್ಯಾಂಕ್ ಗಳ( ಸಿಸ್ಟನ್ ವ್ಯವಸ್ಥೆ) ಮೂಲಕ ನೀರು ಪೂರೈಸಲಾಗುತ್ತಿದೆ.ಇದರಿಂದ ನೀರು ಪೋಲಾಗುತ್ತದೆ ಎನ್ನುವ ಆರೋಪಗಳೂ ಇದ್ದು ,ಪಂಚಾಯತ್ ಆಡಳಿತ ಜಲಜೀವನ್ ಮಿಷನ್ ಯೋಜನೆಯ ಮೂಲಕ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ


ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡುಹೊಳೆ ಎಂಬಲ್ಲಿ ಸುಮಾರು 50 ಮನೆಗಳಿಗೆ ಕಳೆದ 2021ರಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಆರಂಭಿಸಲಾಗಿತ್ತು. ಫಲಾನುಭವಿಗಳನ್ನು ಗುರುತಿಸಿದ ಬಳಿಕ ಆರಂಭಿಕ ಹಂತದಲ್ಲಿ ಮನೆಮನೆಗೆ ನಳ್ಳಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪೈಪ್ ಲೈನ್ ಮಾಡಿ ಮೀಟರ್ ಅಳವಡಿಸಲಾಗಿತ್ತು. ಆದರೆ ನಳ್ಳಿ ಅಳವಡಿಸಿದ ಬಳಿಕ ಅದಕ್ಕೆ ಕಾಕ್ರೀಟ್ ಕಟ್ಟೆಯನ್ನು ನಿರ್ಮಿಸದೇ ಅರೆಬರೆಯಾಗಿ ಕಾಮಗಾರಿ ಮುಗಿಸಲಾಗಿದೆ.ಇದಲ್ಲದೇ ಮನೆಯ ನಳ್ಳಿ ಸಂಪರ್ಕಕಕ್ಕೆ ಅಗೆಯಲಾದ ಗುಂಡಿಯನ್ನು ಮುಚ್ಚದೇ ನಿರ್ಲಕ್ಷö್ಯ ತೋರಿದ್ದು ಈ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ ಆಗಿದೆಯೇ ಎನ್ನುವ ಅನುಮಾನ ಕಾಡಿದೆ.

ವಿಪರ್ಯಾಸವೆಂದರೆ ಮನೆಮನೆಗೆ ನಳ್ಳಿ ನೀರು ಪೂರೈಕೆಗಾಗಿ ಕೊಳವೆ ಬಾವಿ ಕೊರೆಸಿದರೂ ಅದಕ್ಕೆ ನೀರಿನ ಸಂಪರ್ಕ ಕಲ್ಪಿಸದೇ ಅಧಿಕಾರಿಗಳು ಈ ಯೋಜನೆಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎನ್ನುವ ಅನುಮಾನ ದಟ್ಟವಾಗಿದೆ.
ಈ ಕುರಿತು ಪಂಚಾಯತ್ ಅಧಿಕಾರಿಗಳನ್ನು ಕೇಳಿದರೆ ಕಾಮಗಾರಿ ಮುಕ್ತಾಯವಾಗಿಲ್ಲ ಹಾಗಾಗಿ ಗುತ್ತಿಗೆದಾರನಿಗೆ ಹಣ ಪಾವತಿಸಿಲ್ಲ ಎನ್ನುತ್ತಾರೆ. ಆದರೆ ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದಿದ್ದು ಸಂಪೂರ್ಣ ನೆನೆಗುದಿಗೆ ಬಿದ್ದಿದ್ದು ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೂಡ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *