ಬೆಂಗಳೂರು: ಕರ್ನಾಟಕ ಗುತ್ತಿಗೆದಾರರ ಸಂಘ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರು ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಮಾಜಿ ಸಿಎಂ ಹಾಗೂ ರಾಜ್ಯಪಾಲರು ಸೇರಿದಂತೆ ವಿವಿಧೆಡೆ ಮನವಿ ಮಾಡಿದ್ದಾರೆ. ಆದರೆ, ತಾವೇ ಬಿಜೆಪಿ ಸರ್ಕಾರದಲ್ಲಿ ಆರೋಪ ಮಾಡಿದಂತೆ ಶೇ.40 ಪರ್ಸೆಂಟ್ ಕಮಿಷನ್ ವಸೂಲಿ ಮಾಡಿದ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೂ ಬಾಕಿ ಬಿಲ್ ಬಿಡುಗಡೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು ಸಚಿವರು ಹಾಗೂ ಶಾಸಕರು ಶೇ.40 ಕಮಿಷನ್ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ, ಕಮಿಷನ್ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ತಪ್ಪು ಮಾಡದೆ ಇರುವವರಿಗೆ ಬಿಲ್ ನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತಪ್ಪು ಮಾಡಿರುವವರಿಗೆ ಆ ಭಯ ಇರುತ್ತದೆ. ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದರು.

ಬಿಜೆಪಿಯವರು ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಶೇ.40 ಪರ್ಸೆಂಟ್ ಕಮಿಷನ್ಗಾಗಿಯೇ ಜನ ಅವರನ್ನ ತಿರಸ್ಕರಿಸಿದ್ದಾರೆ. ನಾವು ಆವತ್ತು ಮಾಡಿರುವ ಆರೋಪವನ್ನ ಸಾಬೀತು ಮಾಡಬೇಕಿದೆ. ಈ ಕಾರಣ ನಾಲ್ಕು ತಂಡಗಳು ತನಿಖೆ ಮಾಡುತ್ತಿದೆ. ಈಗ ತನಿಖೆ ಮಾಡುತ್ತಿರುವ ಎಲ್ಲ ಕಾಮಗಾರಿಗಳು ಕಳೆದ ಮೂರು ವರ್ಷದ ಹಿಂದೆ ಮುಕ್ತಾಯವಾಗಿದೆ. ಈಗ ಬಿಲ್ಗಾಗಿ ಆತುರ ಪಟ್ಟರೆ ಹೇಗೆ? ಎಂದು ಗುತ್ತಿಗೆದಾರರಿಗೆ ಪ್ರಶ್ನೆ ಮಾಡಿದ್ದಾರೆ.


