ಕಾರ್ಕಳ: ಉಡುಪಿಯ ಖಾಸಗಿ ನರ್ಸಿಂಗ್ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಮೂಲಕ ರಹಸ್ಯವಾಗಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ್ದ ಆರೋಪ ಎದುರಿಸುತ್ತಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕಾರ್ಕಳ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ತಪ್ಪಿತಸ್ಥ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿಯು ಅಮಾನತುಗೊಳಿಸಿದೆ, ಆದರೆ ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಮಹಿಳಾಮೋರ್ಚಾ ಆರೋಪಿಸಿದೆ
ವಿದ್ಯಾ ಸಂಸ್ಥೆಯಲ್ಲಿ ಕಲಿಯಲು ಬರುವ ವಿದ್ಯಾರ್ಥಿನಿಯರೇ ಇಂತಹ ಹೇಗೆ ಕೃತ್ಯಕ್ಕೆ ಇಳಿದಿರುವುದು ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಈ ಕೃತ್ಯದ ಕುರಿತು ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ. ಕಳೆದ ವರ್ಷ ಹಿಜಾಬ್ ವಿಚಾರದಲ್ಲಿ ಗಲಭೆ ಹಬ್ಬಿಸಲಾಗಿತ್ತು,ಇದೀಗ ಮುಂದುವರಿದ ಭಾಗವಾಗಿ ಅಮಾಯಕ ವಿದ್ಯಾರ್ಥಿನಿಯರ ಮಾನಹಾನಿ ಮಾಡುವ ಉದ್ದೇಶ ಅಡಗಿದೆ ಎಂದು ಆರೋಪಿಸಿದ್ದಾರೆ.
ಇಂತಹ ಘಟನೆಯಿಂದ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸಲು ಆತಂಕ ಪಡುವಂತಾಗಿದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯೋದು ಮೂಲಭೂತ ಹಕ್ಕಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಣ ಸಂಸ್ಥೆಗಳಿಗೆ ಹೇಗೆ ಕಳುಹಿಸುವುದೆನ್ನುವ ಚಿಂತೆ ಪೋಷಕರನ್ನು ಕಾಡತೊಡಗಿದೆ ಈ ಘಟನೆ ನಡೆದು ವಾರ ಕಳೆದರೂ ಶಿಕ್ಷಣ ಸಂಸ್ಥೆಯವರು ಪೊಲೀಸ್ ಇಲಾಖೆಗೆ ದೂರು ನೀಡಿಲ್ಲ.
ಈ ಘಟನೆ ಲವ್ ಜಿಹಾದ್ ನ ಇನ್ನೊಂದು ಭಾಗವಾಗಿದ್ದು, ತಕ್ಷಣವೇ ತಪ್ಪಿತಸ್ಥ ವಿದ್ಯಾರ್ಥಿನಿಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಮಾಲಿನಿ ಜಿ ಶೆಟ್ಟಿ,ಶೋಭಾ ದೇವಾಡಿಗ,ವಿಜೇತಾ, ರೇಷ್ಮಾ ಶೆಟ್ಟಿ, ಸವಿತಾ ಕೋಟ್ಯಾನ್, ವಿಜೇತಾ ಪೈ,ಲಕ್ಷ್ಮೀ ಕಿಣಿ, ಪಲ್ಲವಿ ಪ್ರವೀಣ್ ಮುಂತಾದವರು ಉಪಸಿತರಿದ್ದರು