ಹಾಸನ: ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾಗಿದ್ದಾರೆ. ಅವರ ಆರೋಗ್ಯದಲ್ಲಿಏರುಪೇರಾದ ಹಿನ್ನೆಲೆ ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ದೇಶಾದ್ಯಂತ ಅಪಾರಭಕ್ತವರ್ಗವನ್ನು ಹೊಂದಿದ್ದಾರೆ.
ಮೇ 3, 1949ರಲ್ಲಿ ರತ್ನವರ್ಮರಾಗಿ ಕಾರ್ಕಳದ ವರಂಗ ಗ್ರಾಮದಲ್ಲಿ ಜನಿಸಿದ್ದ ಸ್ವಾಮೀಜಿಯವರಿಗೆ 75 ವರ್ಷವಾಗಿತ್ತು. ಸಂಸ್ಕೃತ, ಪ್ರಾಕೃತ ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಇವರು ಜೈನ ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದರು. ಅಲ್ಲದೇ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು. ಡಿ.12, 1969ರಂದು ಸ್ವಾಮೀಜಿಗಳಾದರು.
1970ರಲ್ಲಿ ಶ್ರವಣಬೆಳಗೊಳದ ಮಠದ ಪೀಠಾಧಿಪತಿಗಳಾದರು. ಹೋಯ್ಸಳ ವಂಶದಿಂದ ನೀಡಿದ ಚಾರುಕೀರ್ತಿ ಸ್ವಾಮೀಜಿ ಎಂಬ ಪಟ್ಟವನ್ನು ಇವರಿಗೂ ನೀಡಲಾಯಿತು. ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕವು ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯುತ್ತಿತ್ತು. 1981,1993, 2006 ಹಾಗೂ 2018ರ ಮಹಾಮಸ್ತಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಇವರದ್ದು.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿರುವ ಈ ಸ್ವಾಮೀಜಿಯವರು ಎಂಜೀನಿಯರಿಂಗ್, ಮೆಡಿಕಲ್ ಪದವಿಗಳಿಗೆ ಕಡಿಮೆ ಫೀ ಪಡೆದು ಅನೇಕರಿಗೆ ವಿದ್ಯಾದಾನ ಮಾಡಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.