ನವದೆಹಲಿ: ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಪಕ್ಕದಲ್ಲೇ ಇರುವ ಮಸೀದಿಯನ್ನು ತೆರವುಗೊಳಿಸಿ, ಅದರ ಜಾಗವನ್ನು ದೇಗುಲ ಟ್ರಸ್ಟ್‌ಗೆ ಮರಳಿಸಬೇಕು ಎಂಬ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಜಿಲ್ಲಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಉತ್ತರಪ್ರದೇಶ ಸುನ್ನಿ ವಕ್ಫ್ ಮಂಡಳಿ ಹಾಗೂ ಶಾಹಿ ಈದ್ಗಾ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ತಡೆಯನ್ನೂ ತೆರವುಗೊಳಿಸಿದೆ. ಈ ಬೆಳವಣಿಗೆಯೊಂದಿಗೆ ಶ್ರೀ ಕೃಷ್ಣ ಜನ್ಮಭೂಮಿ ದೇಗುಲಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಪುನಾರಂಭಕ್ಕೆ ಹಾದಿ ಸುಗಮವಾದಂತಾಗಿದೆ.
ಸಿವಿಲ್ ನ್ಯಾಯಾಧೀಶರ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬಂಧ ಹೊಸದಾಗಿ ವಿಚಾರಣೆ ಆರಂಭಿಸಿ ಮಥುರಾದ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಬೇಕು. ಎಲ್ಲ ಕಕ್ಷಿದಾರರು ತಮ್ಮ ವಾದಗಳನ್ನು ಮಥುರಾದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಮುಂದೆ ಮಂಡಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಶ್ರೀಕೃಷ್ಣ ಜನ್ಮಭೂಮಿ ವಿವಾದ 13.37 ಎಕರೆ ಜಾಗಕ್ಕೆ ಸಂಬಂಧಿಸಿದ್ದಾಗಿದೆ. 1973ರಲ್ಲಿ ಈ ಕುರಿತು ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯ, ಮಸೀದಿ ಟ್ರಸ್ಟ್ ಹಾಗೂ ದೇಗುಲ ಆಡಳಿತ ಮಂಡಳಿಗಳ ನಡುವೆ ಮೂಡಿದ ಒಮ್ಮತವನ್ನು ಆಧರಿಸಿ ಜಾಗವನ್ನು ಹಂಚಿಕೆ ಮಾಡಿತ್ತು. ಆದರೆ ಸಿವಿಲ್ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ 2016ರಲ್ಲಿ ದೇವರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 2020ರಲ್ಲಿ ಹಿಂದು ಕಕ್ಷಿದಾರರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲಾಗದು ಎಂದು ಸಿವಿಲ್ ನ್ಯಾಯಾಲಯ ತಿರಸ್ಕರಿಸಿತ್ತು.
ಆದರೆ, ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಹೇಳುವ ಮೂಲಕ ಸಿವಿಲ್ ನ್ಯಾಯಾಲಯದ ಆದೇಶವನ್ನು ಬದಿಗೊತ್ತಿತ್ತು. ಇದು 1991ರ ಆರಾಧನಾ ಸ್ಥಳಗಳ ಕಾಯ್ದೆಗೆ ವಿರುದ್ಧವಾಗಿದೆ ಎಂದು ಮುಸ್ಲಿಂ ಕಕ್ಷಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಪ್ರಕರಣಕ್ಕೆ ತಡೆ ಕೊಟ್ಟಿತ್ತು