ಬೆಳ್ಮಣ್ : ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯದ ಉಗ್ಗೆದಬೆಟ್ಟು ಶಾಂಭವಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಆಕ್ರೋಶಗೊಂಡ ಸ್ಥಳೀಯರು ಶುಕ್ರವಾರ ಮರಳು ಸಾಗಾಟದ ಟೆಂಪೋವನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಶಾಂಭವಿ ನದಿಯಿಂದ ಮರಳು ಒಯ್ಯತ್ತಿದ್ದ ಟೆಂಪೋವನ್ನು ತಡೆದು ನಿಲ್ಲಿಸಿದ ಸ್ಥಳೀಯರು, ಇಲ್ಲಿ ಮರಳುಗಾರಿಕೆ ಮಾಡುವುದರಿಂದ ನಮ್ಮೂರ ರಸ್ತೆ ಹಾಗೂ ಪರಿಸರ ಹಾಳಾಗುತ್ತದೆ ಆದ್ದರಿಂದ ಮರಳುಗಾರಿಕೆಯನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಮರಳುಗಾರಿಕೆ ನಡೆಸುತ್ತಿದ್ದಾತನ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಬಗ್ಗೆ ಈಗಾಗಲೇ ಮುಂಡ್ಕೂರು ಗ್ರಾಮ ಪಂಚಾಯತ್‌ಗೂ ಲಿಖಿತ ದೂರು ನೀಡಲಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿ ಮರಳುಗಾರಿಕೆ ನಡೆಸಲು ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಈ ಬಗ್ಗೆ ಗ್ರಾಮಸ್ಥರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಮರಳು ಸಾಗಾಟಗಾರರಿಗೆ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ.