ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಾಸಕರು ಹಾಗೂ ಸಚಿವರ ನಡುವೆ ಸಮನ್ವಯ ಕೊರತೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ವಯಸ್ಸಿನಲ್ಲಿ ಕಿರಿಯ ಸಚಿವರು ಹಿರಿಯ ಶಾಸಕರಿಗೆ ಗೌರವ ಕೊಡುತ್ತಿಲ್ಲವೆಂದು ಈ ಹಿಂದೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಬಹಿರಂಗ ಅಸಮಾಧಾನ ಹೊರಹಾಕಿದ್ದ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಈ ಬಾರಿ ಸಚಿವದ್ವಯರ ವಿರುದ್ಧ ಮತ್ತೊಂದು ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ. ಕಾಮಗಾರಿಯೊಂದರ ಕುರಿತು ತಮ್ಮ ಬಗ್ಗೆ ಅನುಮಾನ ಬರುವಂತೆ ಸಚಿವ ಕೃಷ್ಣ ಬೈರೇಗೌಡ ಸದನದಲ್ಲೇ ಮಾತನಾಡಿದ್ದರು.
ಈ ಬಗ್ಗೆ ಪರಿಶೀಲನೆ ಸಭೆ ನಡೆಸುವುದಾಗಿ ಹೇಳಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮೌನವಹಿಸಿರುವುದು ತಮ್ಮ ವಿರುದ್ಧ ಅನುಮಾನ ಮೂಡುವಂತಾಗಿದೆ. ಇದು ಪರಿಹಾರವಾಗಲು ಸದರಿ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಶಾಸಕ ಬಿ.ಆರ್ ಪಾಟೀಲ್ ಆಗ್ರಹಿಸಿದ್ದಾರೆ.
ತನಿಖೆ ನಡೆಯದ ಹೊರತು ತಾವು ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ. ಒಂದು ವೇಳೆ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿಯೂ ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲೇನಿದೆ?: 2013ರಲ್ಲಿ ನಾನು ಶಾಸಕನಾಗಿದ್ದ ವೇಳೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ (KRIDL) ನೀಡಲಾಗಿದ್ದ ಕಾಮಗಾರಿಗಳು ವಿಳಂಬ, ಕೆಲ ಕಾಮಗಾರಿಗಳು ಕಳಪೆ ಮತ್ತು ಅರ್ಧಂಬರ್ಧವಾಗಿರುವ ಬಗ್ಗೆ ಕಳೆದ ವಿಧಾನಸಭಾ ಅಧಿವೇಶನದಲ್ಲಿ ನಾನು ಪ್ರಶ್ನೆ ಮಾಡಿದ್ದೆ. ಈ ಬಗ್ಗೆ ಸದನದಲ್ಲಿ ಸಂಬಂಧಪಟ್ಟ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನ ಸೆಳೆದಾಗ, ಅವರ ಪರವಾಗಿ ಸಚಿವ ಕೃಷ್ಣ ಬೈರೇಗೌಡ ಅವರು, ಇಷ್ಟೆಲ್ಲ ಗೊತ್ತಿದ್ದರೂ ಕಾಮಗಾರಿಗಳನ್ನು ಯಾಕೆ ಕೊಟ್ಟಿದ್ದೀರಿ’ಎಂದು ವಾದ ಮಾಡಿದ್ದರು ಎಂದು ಬಿ.ಆರ್.ಪಾಟೀಲ್ ಪತ್ರದಲ್ಲಿ ಬರೆದಿದ್ದಾರೆ.
ಈ ವಾದದ ಮೂಲಕ ಸಚಿವ ಕೃಷ್ಣ ಬೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಮಾಡಿದ್ದಾರೆ. ಇದರಿಂದಾಗಿ ಕೆಆರ್ಐಡಿಎಲ್ನಿಂದ ನಾನು ಹಣ ಪಡೆದು ಕಾಮಗಾರಿ ಕೊಟ್ಟಿದ್ದೇನೆಂಬ ಅರ್ಥ ಬರುವಂತಾಗಿದೆ. 2013ರಲ್ಲಿ ನಾನು ಶಾಸಕನಾಗಿದ್ದ ವೇಳೆ ಬೇರೆ ಸಂಸ್ಥೆಗಳಿಗೆ ಕಾಮಗಾರಿ ನೀಡಿದರೆ ವಿಳಂಬವಾಗುತ್ತದೆ ಎಂಬ ಕಾರಣದಿಂದ ಕೆಲವು ಕಾಮಗಾರಿಗಳನ್ನು ಕೆಆರ್ಐಡಿಎಲ್ಗೆ ನೀಡಲಾಗಿತ್ತು. ಆದರೆ, ಸಚಿವರು ಎಲ್ಲ ಗೊತ್ತಿದ್ದೂ ಕೆಆರ್ಐಡಿಎಲ್ಗೆ ಕಾಮಗಾರಿ ಏಕೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸುವ ಮೂಲಕ ನನ್ನ ಬಗ್ಗೆಯೇ ಅನುಮಾನ ಬರುವಂತೆ ಮಾಡಿದ್ದಾರೆ. ಇದಾದ ನಂತರ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕಾಮಗಾರಿಗಳ ಬಗ್ಗೆ ಗಮನ ವಹಿಸಿ ಪ್ರತ್ಯೇಕವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸುವುದಾಗಿ ಹೇಳಿದ್ದರು. ಆದರೂ ಈ ಕುರಿತು ಪರಿಶೀಲನಾ ಸಭೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಬಗ್ಗೆಯೇ ಆರೋಪ ಬಂದಿದೆ. ಇಂತಹ ಆರೋಪ ಹೊತ್ತುಕೊಂಡು ನಾನು ಡಿ.4ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡರೆ ನನ್ನ ಮೇಲೆ ಮಾಡಿರುವ ಆರೋಪಗಳನ್ನು ಒಪ್ಪಿಕೊಂಡಂತಾಗುತ್ತದೆ. ಇದು ನೈತಿಕ ದೃಷ್ಟಿಯಿಂದ ಸರಿಯೂ ಅಲ್ಲ, ಆದ್ದರಿಂದ ಈ ವಿಚಾರದ ಸತ್ಯಾಸತ್ಯತೆ ಹೊರಗೆ ಬರುವಂತೆ ತನಿಖೆ ಮಾಡಲು ಆದೇಶ ನೀಡಿ ಆರೋಪದಿಂದ ಮುಕ್ತರನ್ನಾಗಿ ಮಾಡಬೇಕು. ಒಂದು ವೇಳೆ ನನ್ನ ಮೇಲಿನ ಆರೋಪ ಸಾಬೀತಾದರೆ ಇವತ್ತೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಆದ್ದರಿಂದ ತುರ್ತು ತನಿಖೆ ಆಯೋಗ ರಚಿಸಬೇಕು ಎಂದು ಬಿ.ಆರ್. ಪಾಟೀಲ್ ಮುಖ್ಯಮಂತ್ರಿಗಳಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.