Share this news

ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಕುದ್ರೊಟ್ಟು ಎಂಬಲ್ಲಿ ಬುಧವಾರ ತಡರಾತ್ರಿ ವ್ಯಕ್ತಿಯೊಬ್ಬರು ತನ್ನ ಕಾರಿನೊಂದಿಗೆ ಸಜೀವ ದಹನವಾಗಿರುವ ಭೀಬತ್ಸ ಘಟನೆ ಸಂಭವಿಸಿದೆ.

ಸಚ್ಚರಿಪೇಟೆ ಕುದ್ರೊಟ್ಟು ನಿವಾಸಿ ಕೃಷ್ಣ ಮೂಲ್ಯ(46) ಎಂಬವರು ತನ್ನ ಮಾರುತಿ ಓಮ್ನಿ ಕಾರಿನೊಂದಿಗೆ ಸಜೀವವಾಗಿ ದಹನವಾಗಿರುವ ವ್ಯಕ್ತಿ ಸಹೋದರರ ನಡುವಿನ ಭೂಮಿ ವ್ಯಾಜ್ಯ ಹಾಗೂ ಸ್ನೇಹಿತರು ಪಡೆದಿದ್ದ ಸಾಲ ಮರುಪಾವತಿಸದೇ ಹಣ ವಂಚನೆಯಿಂದ ಮನನೊಂದು ಕೃಷ್ಣ ಸಫಲಿಗ ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಕೃಷ್ಣ ಮೂಲ್ಯ ತನ್ನ ಓಮ್ನಿ ಕಾರಿನಲ್ಲಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದ. ಈತನಿಗೆ ಮದುವೆಯಾಗಿದ್ದು ಸಂಸಾರದಲ್ಲಿ ಜಗಳವಾಗಿದ್ದು ಪತ್ನಿ ಮಕ್ಕಳನ್ನು ಬಿಟ್ಟು ತನ್ನ ತಂದೆಯಿಂದ ಪಾಲಿಗೆ ಬಂದ ಜಾಗದ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ. ಪತ್ನಿ ಮಕ್ಕಳು ಮನೆಬಿಟ್ಟ ಬಳಿಕ ಮಾನಸಿಕವಾಗಿ ನೊಂದಿದ್ದ ಕೃಷ್ಣ ಮೂಲ್ಯ ತನ್ನ ಸಹೋದರ ಸಹೋದರಿಯ ಜತೆಗೂ ಆಸ್ತಿ ವಿಚಾರದಲ್ಲಿ ಮನಸ್ತಾಪ ಹೊಂದಿದ್ದ.ತಂದೆಯ ಆಸ್ತಿ ಹಂಚಿಕೆಯ ವಿಚಾರದಲ್ಲಿ ಉಂಟಾದ ಕಲಹದಲ್ಲಿ ಕೃಷ್ಣ ಮೂಲ್ಯನ ಅಣ್ಣ ತಮ್ಮಂದಿರು ಹಾಗೂ ಸಹೋದರಿಯರು ಮನೆಯನ್ನು ಅವನಿಗೆ ಬಿಟ್ಟುಕೊಟ್ಟು ಬೇರೆ ಮನೆ ಮಾಡಿಕೊಂಡು ವಾಸವಿದ್ದರು.

ಬುಧವಾರ ಕೃಷ್ಣ ಮೂಲ್ಯ ಸಹೋದರಿಯ ಪುತ್ರಿಯ ಮಹೆಂದಿ ಕಾರ್ಯಕ್ರಮದಲ್ಲಿ ಈತ ಭಾಗಿಯಾಗಿದ್ದ ಅಲ್ಲಿ ಜಾಗದ ವಿಚಾರದಲ್ಲಿ ಸಹೋದರರ ನಡುವೆ ಮಾತಿನ ಚಕಮಕಿ ನಡೆದು ಆತ ತಡರಾತ್ರಿ ತನ್ನ ಮನೆಗೆ ಹೋಗಿದ್ದ ಎನ್ನಲಾಗಿದೆ.ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಈತ ಈ ಘಟನೆಯ ಬಳಿಕ ಸಿಟ್ಟಿಗೆದ್ದು ಮುಂಜಾನೆ 3 ಗಂಟೆ ಸುಮಾರಿಗೆ ಮದುವೆ ಮನೆಯಲ್ಲಿ ಮಲಗಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಈ ಘಟನೆಯಿಂದ ಇಬ್ಬರಿಗೆ ಸುಟ್ಟಗಾಯಗಳಾಗಿವೆ. ಬಳಿಕ ಮನೆಯಲ್ಲಿದ್ದ ಕಾರಿಗೆ ಹಾಗೂ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೂ ಮುನ್ನ ಆತ ಸಮೀಪದ ಅಂಗಡಿಗೆ, ಜೆಸಿಬಿ, ಹಾಗೂ ಕಾರುಗಳಿಗೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚುವ ತಂತ್ರ ರೂಪಿಸಿದ್ದ. ಆದರೆ ಮಾನಸಿಕವಾಗಿ ವಿಚಲಿತನಾಗಿದ್ದ ಈತನ ಕೃತ್ಯ ಕೊನೇಕ್ಷಣದಲ್ಲಿ ವಿಫಲವಾಗಿ ದೊಡ್ಡ ಸರಣಿ ಅನಾಹುತ ತಪ್ಪಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತ ಡೆತ್ ನೋಟ್ ಬರೆದು ಪಕ್ಕದ ಗೋಡಗೆ ಅಂಟಿಸಿದ್ದ. ನನಗೆ ಎಲ್ಲರೂ ಮೋಸ ಮಾಡಿದ್ದಾರೆ, 3/4 ಜನ ಲಕ್ಷಾಂತರ ರೂ ವಂಚಿಸಿದ್ದಾರೆ, ಜಮೀನಿನ ವಿಚಾರದಲ್ಲಿ ಮಧ್ಯವರ್ತಿಯೊಬ್ಬ ವಂಚಿಸಿದ್ದಾನೆ, ನನ್ನ ವಿರುದ್ಧ ಮಾಟಮಂತ್ರ ಮಾಡಿದ್ದಾರೆ ಎಂದೆಲ್ಲಾ ಚೀಟಿಯಲ್ಲಿ ವಿಚಿತ್ರವಾಗಿ ಬರೆದು ಅಂಟಿಸಿದ್ದಾನೆ.

ಈ ಘಟನೆಗೆ ನಿಖರವಾದ ಕಾರಣ ಏನಿರಬಹುದೆಂದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಕಾರ್ಕಳ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಘಟನಾಸ್ಥಳಕ್ಕೆ ಆಗಮಿಸಿದ್ದು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *