ಕಾರ್ಕಳ : ದಿಗಂಬರ ಮುನಿ ಕಾಮಕುಮಾರ ನಂದಿ ಮಹಾರಾಜ ಅವರು ಜೈನ ಸಮಾಜದ ಆದರ್ಶ ತತ್ವಗಳ ಪರಿಪಾಲನೆಯೊಂದಿಗೆ ಜೈನ ಸಮುದಾಯ ಮಾತ್ರವಲ್ಲದೇ ಸಮಸ್ತ ಸಮಾಜದ ಒಳಿತನ್ನು ಬಯಸಿ ಸರ್ವೇ ಜನಃ ಸುಖಿನೋ ಭವಂತು ಎಂಬ ವಾಕ್ಯದಂತೆ ಇತರರು ನಮ್ಮೊಂದಿಗೆ ಬೆಳೆಯಬೇಕೆಂದು ಲೋಕ ಸಂದೇಶ ನೀಡುತ್ತಿದ್ದ ದಿಗಂಬರ ಮುನಿಯ ಹತ್ಯೆ ಅತ್ಯಂತ ಹೇಯ ಕೃತ್ಯ,ಈ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಆಗ್ರಹಿಸಿದ್ದಾರೆ.

ಸತ್ಯ, ಪರಹಿತ, ಅಹಿಂಸೆಯ ಮೂಲಕ ಜಗತ್ತಿನ ಶಾಂತಿಗಾಗಿ ಜೀವನವನ್ನು ಮುಡಿಪಾಗಿಟ್ಟ ಮುನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಶಾಂತಿ ಎನ್ನುವ ಪದದ ಅರ್ಥಕ್ಕೆ ಕಳಂಕ ತಂದಿದೆ. ಸಮಾಜದ ಶಾಂತಿಯನ್ನೇ ಸರ್ವಸ್ವ ಎಂದು ಬಯಸಿದ್ದ ಸಂತರಿಗೆ ಈ ರೀತಿಯಾದರೇ ಇನ್ನು ಸಾಮಾನ್ಯ ಜನರ ಪರಿಸ್ಥಿತಿಯೇನು ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಹೇಯ ಕೃತ್ಯ ಆರಂಭವಾಗಿದೆ. ಹೀಗೆ ಮುಂದುವರೆದರೆ ಸಮಸ್ತ ಹಿಂದೂ ಸಮಾಜ ನಾಶಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಸ್ತ ಜೀವ ಸಂಕುಲಗಳ ಒಳಿತು ಬಯಸಿದ ಮುನಿಯನ್ನು ಇಷ್ಟೊಂದು ಹೇಯವಾಗಿ ಕೊಲೆ ಮಾಡಿ ಜೈನ ಸಮುದಾಯಕ್ಕೆ ದುಖ: ಉಂಟು ಮಾಡಿರುವುದು ಮಾತ್ರವಲ್ಲದೇ ಸಮಾಜದ ಎಲ್ಲಾ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಆದರೆ, ಈ ಕುರಿತು ಸರಕಾರ ಇನ್ನೂ ಸರಿಯಾದ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಮುನಿಯನ್ನು ಭೀಕರವಾಗಿ ಹತ್ಯೆಗೈದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ತನಿಖೆ ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ

