ಬೆಂಗಳೂರು: ನಿನ್ನೆಯಿಂದ ವಿಧಾನ ಮಂಡಲ ಅಧಿವೇಶನ ಶುರುವಾಗಿದ್ದು, ಇಂದು ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಘೋಷಣೆಗಳ ಬಗ್ಗೆ ಪ್ರಸ್ತಾಪ ಆಗಲಿದೆ. ಈ ವೇಳೆ ಸದನದಲ್ಲಿ ಗ್ಯಾರಂಟಿ ಘೋಷಣೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟಿಸುವ ಸಾಧ್ಯತೆಯಿದೆ. ಸದನದ ಒಳಗೆ ಮತ್ತು ಹೊರಗೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದ್ದು, ಏಕಕಾಲದಲ್ಲಿ 2 ಕಡೆ ಪ್ರತಿಭಟನೆ ಮೂಲಕ ಒತ್ತಡ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.
ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದು. ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದ್ದು ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಚಾರ, ಬಿಜೆಪಿ ಅವಧಿಯ ವಿವಾದಿತ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸದನದಲ್ಲಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿದ್ದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷ ಕಾಂಗ್ರೆಸ್ ಸಜ್ಜಾಗಿದೆ.