ಬೆಂಗಳೂರು:ಶಕ್ತಿ ಯೋಜನೆಯಿಂದ ಆಗಿರುವ ನಷ್ಟ ಭರಿಸಲು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿದ್ದ ಹೋರಾಟವನ್ನು ಖಾಸಗಿ ಸಾರಿಗೆ ಒಕ್ಕೂಟವು ಹಿಂದಕ್ಕೆ ಪಡೆದಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಜತೆಗೆ ಮಾತುಕತೆ ನಡೆಸಿ ಒಕ್ಕೂಟದ ಬೇಡಿಕೆಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್ ಕೈ ಬಿಡಲಾಯಿತು .
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಖಾಸಗಿ ಸಾರಿಗೆ ಒಕ್ಕೂಟದ ಪ್ರಮುಖ ನಟರಾಜ್ ಶರ್ಮಾ, ನಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸ್ವತಃ ಸಾರಿಗೆ ಸಚಿವರೇ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ನಾಳೆಯಿಂದಲೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಬಂದ್ ವಾಪಸ್ ಪಡೆದುಕೊಂಡಿದ್ದೇವೆ ಎಂದರು.
ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟಗಳ ಬಹುತೇಕ ಬೇಡಿಕೆ ಈಡೇರಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದ ಫ್ರೀಡಂ ಪಾರ್ಕ್ಗೆ ಭೇಟಿ ನೀಡಿದ ಅವರು, ಸಂಘಟನೆಗಳ ಬೇಡಿಕೆ ಆಲಿಸಿ ಬಳಿಕ ಮಾತನಾಡಿದರು.ಅವರ ಬಹುತೇಕ ಎಲ್ಲಾ ಬೇಡಿಕೆ ಈಡೇರಿಸುತ್ತೇವೆ. ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ನಿಗಮ ಮಂಡಳಿಯನ್ನು ರಚಿಸಲಾಗುವುದು.ಅವರ ಸಮಸ್ಯೆಗಳು ಈ ಸರ್ಕಾರ ಬರುವ ಮುನ್ನವೂ ಇತ್ತು, ಆದರೆ ಶಕ್ತಿ ಯೋಜನೆಯಿಂದ ಸಮಸ್ಯೆಯಾಗಿದೆ ಎನ್ನುವುದು ಸರಿಯಲ್ಲ ಎಂದರು.