ನವದೆಹಲಿ : ಕೆಲ ವರ್ಷಗಳ ಹಿಂದೆ ದೇಶದಲ್ಲಿ ಸಲಿಂಗ ಕಾಮವನ್ನು ಸುಪ್ರೀಂಕೋರ್ಟ್ ಅಪರಾಧ ಮುಕ್ತಗೊಳಿಸಿದ್ದರೂ ಸಲಿಂಗಿಗಳ ಮದುವೆ ಅಥವಾ ಲಿವಿಂಗ್ ಟುಗೆದರ್‌ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಇದೀಗ ವಿರೋಧ ವ್ಯಕ್ತಪಡಿಸಿದೆ.
ಸಲಿಂಗಿಗಳ ಮದುವೆ, ಲಿವಿಂಗ್ ಟುಗೆದರ್ ಹಾಗೂ ಲೈಂಗಿಕ ಸಂಬಂಧವು ಭಾರತೀಯ ಕೌಟುಂಬಿಕ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿದೆ. ಜೊತೆಗೆ ಇಂಥ ಸಂಬಂಧಕ್ಕೆ ನೀಡುವ ಮಾನ್ಯತೆ, ಅತ್ಯಂತ ಸಮತೋಲಿತವಾಗಿರುವ ವೈಯಕ್ತಿಕ ಕಾನೂನು ವ್ಯವಸ್ಥೆ ಮತ್ತು ಸ್ವೀಕೃತವಾಗಿರುವ ಸಾಮಾಜಿಕ ಮೌಲ್ಯಗಳನ್ನು ನಾಶಗೊಳಿಸುತ್ತದೆ ಎಂದು ಹೇಳಿದೆ.
ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ (Indian Family Concept) ಪುರುಷನು ಗಂಡನೆಂದೂ, ಮಹಿಳೆಯು ಹೆಂಡತಿಯೆಂದೂ, ಅವರ ಸಂಬಂಧದಿಂದ ಜನಿಸುವ ಸಂತಾನವನ್ನು ಮಗು ಎಂದೂ ಗುರುತಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾದ ಯಾವುದೇ ವ್ಯವಸ್ಥೆಯು ಕೌಟುಂಬಿಕ ವ್ಯವಸ್ಥೆ ಎಂದು ಕರೆಸಿಕೊಳ್ಳುವುದಿಲ್ಲ.
ಹೀಗಾಗಿ ಈ ವ್ಯವಸ್ಥೆಗೆ ವಿರುದ್ಧವಾದ ಸಂಬಂಧವನ್ನೂ ಮದುವೆ ಎಂದು ಪರಿಗಣಿಸಬೇಕೆಂಬ ಸಲಿಂಗಿಗಳ ಅರ್ಜಿಯನ್ನು ತಿರಸ್ಕರಿಸಬೇಕು. ಸಲಿಂಗ ಕಾಮವನ್ನು ಅಪರಾಧ ಮುಕ್ತಗೊಳಿಸಿದ್ದರೂ, ಅದನ್ನೇ ಆಧಾರವಾಗಿಟ್ಟುಕೊಂಡು ಅರ್ಜಿದಾರರು ಸಲಿಂಗ ವಿವಾಹವನ್ನು ದೇಶದ ಕಾನೂನಿನ ಅನ್ವಯ ಮಾನ್ಯಗೊಳಿಸುವುದು ತಮ್ಮ ಮೂಲಭೂತ ಹಕ್ಕು ಎಂದು ವಾದ ಮಂಡಿಸಲಾಗದು ಎಂದು ಸರ್ಕಾರ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸಿದೆ.