ವರದಿ: ಗಣೇಶ್ ಪಂಜ
ಕಿನ್ನಿಗೋಳಿ:ಈ ಬಾರಿ ಮಳೆ ಕೊರತೆಯಿಂದ ನಂದಿನಿ ನದಿಯಲ್ಲಿ ಸಮುದ್ರದ ಉಪ್ಪು ನೀರು ಹರಿಯುತ್ತಿರುವ ಪರಿಣಾಮದಿಂದ ಸಸಿಹಿತ್ಲು ಗ್ರಾಮದ ನೂಎಆರು ಎಕರೆ ಭತ್ತದ ಕೃಷಿಗೆ ಹಿನ್ನಡೆಯಾಗಿದ್ದು, ರೈತರು ತೀವೃ ಸಂಕಷ್ಟಕ್ಕೀಡಾಗಿದ್ದಾರೆ. ಮೂಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ಕೊಯಿಕುಡೆ ಮತ್ತಿತರ ಸುಮಾರು 100 ಎಕರೆಗೂ ಅಧಿಕ ಭತ್ತದ ಕೃಷಿ ಜಮೀನಿಗೆ ಉಪ್ಪು ನೀರು ನುಗ್ಗಿ ಸಮಸ್ಯೆಯಾಗಿದೆ.
ಪಾವಂಜೆ ಮೂಲಕ ಸಸಿಹಿತ್ಲುನಲ್ಲಿ ಪಡುಗಡಲನ್ನು ಸೇರುವ ನಂದಿನಿ ನದಿಯಲ್ಲಿ ಮಳೆಯ ಕೊರತೆಯಿಂದ ಮಳೆನೀರಿನ ಹರಿಯದ ಹಿನ್ನಲೆಯಲ್ಲಿ ಸಮುದ್ರದ ನೀರು ಹಿಮ್ಮುಖವಾಗಿ ನಂದಿನಿ ನದಿಯಲ್ಲಿ ಹರಿಯುತ್ತಿದ್ದು ಸಮುದ್ರದ ನೀರು ಬರುತ್ತಿದ್ದು ಪಂಜ ಮೊಗಪಾಡಿವರೆಗೆ ಉಪ್ಪು ನೀರು ಹರಿಯುತ್ತಿದೆ. ಉಪ್ಪುನೀರಿನಿಂದಾಗಿ ಕೃಷಿ ಚಟುವಟಿಕೆಗಳಿಗೆ ತೀವೃ ತೊಂದರೆಯಾಗುತ್ತಿದೆ ಮಾತ್ರವಲ್ಲದೇ ಪಕ್ಕದಲ್ಲೇ ಕೆಮ್ರಾಲ್ ಪಂಚಾಯತ್ ನ ಕುಡಿಯುವ ನೀರಿನ ಬಾವಿ ಇದ್ದು ಇದರಿಂದ ಕುಡಿಯುವ ನೀರಿಗೂ ಉಪ್ಪುನೀರು ಬೆರೆತು ನೀರು ಸರಬರಾಜಿಗೂ ಸಮಸ್ಯೆಯಾಗಿದೆ.
ಉಪ್ಪು ನೀರು ಹಿಮ್ಮುಖವಾಗಿ ಹರಿಯದಂತೆ ಚೇಳಾರಿನಲ್ಲಿ ಅಣೆಕಟ್ಟು ನಿರ್ಮಿಸಲಾಗಿದ್ದು ಮಳೆಗಾಲ ಆರಂಭವಾಗುತ್ತಿದ್ದAತೆಯೇ ಜೂನ್ ಮೊದಲ ವಾರದಲ್ಲಿ ಅಣೆಕಟ್ಟಿನ ಗೇಟ್ ಗಳನ್ನು ತೆಗೆಯಲಾಗುತ್ತದೆ ಆದರೆ ಈ ವರ್ಷ ಸಮರ್ಪಕ ಮಳೆಯಿಲ್ಲದ ಕಾರಣ ಜೂನ್ ಜೂನ್ 15ರ ನಂತರ ಗೇಟ್ ತೆಗೆದ ಪರಿಣಾಮ ಉಪ್ಪುನೀರು ಗದ್ದೆಗಳಿಗೆ ನುಗ್ಗಿದೆ.
ಪಂಜ ಮೊಗಪಾಡಿ, ಕೊಯಿಕುಡೆ ಬಾಗದ ರೈತರು ಪ್ರತೀ ವರ್ಷ ಮೇ ತಿಂಗಳಲ್ಲಿ ಭತ್ತದ ಬಿತ್ತನೆ ಮಾಡುತ್ತಿದ್ದು ಜೂನ್ ಪ್ರಥಮ ವಾರದಲ್ಲಿ ನಾಟಿ ಕಾರ್ಯ ಮುಗಿಯುತ್ತದೆ,ಆದರೆ ಈ ಬಾರಿ ಅಗೆ ಹಾಕಿ 50 ದಿನಗಳು ಕಳೆದರೂ ಮಳೆಯಿಲ್ಲದೇ ನಾಟಿ ಕಾರ್ಯ ಆರಂಭವಾಗಿಲ್ಲ. ಒಂದೆಡೆ ಮಳೆಯ ಕೊರತೆ ಇನ್ನೊಂದೆಡೆ ಉಪ್ಪು ನೀರಿನ ಸಮಸ್ಯೆಯಿಂದ ಭತ್ತದ ಕೃಷಿಕರು ಕಂಗಾಲಾಗಿದ್ದಾರೆ