ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಇಂದಿರಾನಗರ ಹಲೆಕ್ಕಿ ಪರಿಸರದಲ್ಲಿ ಉರುಳಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮೆಸ್ಕಾಂ ಲೈನ್ ಮ್ಯಾನ್ ದೇವಣ್ಣ ರಾವ್ ಮತ್ತು ಸಾಣೂರು ಪಂಚಾಯತ್ ಸದಸ್ಯ ಪ್ರಕಾಶ್ ರಾವ್ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಚಿರತೆ ಘರ್ಜಿಸುವ ಸದ್ದು ಕೇಳಿ ಅತ್ತ ಕಡೆ ಹೋದಾಗ ಚಿರತೆ ಉರುಳಿಗೆ ಸಿಲುಕಿ ಒದ್ದಾಡುತ್ತಿತ್ತು.
ಬಳಿಕ ಕಾರ್ಕಳ ನಗರದ ಸಾಮಾಜಿಕ ಕಾರ್ಯಕರ್ತ ಹಾಗೂ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಅವರಿಗೆ ವಿಷಯವನ್ನು ತಿಳಿಸಿ ಕೂಡಲೇ ಅವರು ಕಾರ್ಯಪ್ರವೃತರಾಗಿ ಅರಣ್ಯ ಇಲಾಖೆ,ವನ್ಯಜೀವಿ ಸಂರಕ್ಷಣಾ ವಿಭಾಗಕ್ಕೆ ತಿಳಿಸಿದಾಗ ಧಾವಿಸಿ ಬಂದ ಆರ್.ಎಫ್.ಒ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಚಂದ್ರ, ರಾಘವೇಂದ್ರ ಶೆಟ್ಟಿ,ಜಯರಾಮ್,ಚಂದ್ರಕಾಂತ್ ಪೌಲ್,ವಿತೇಶ್ ಶೆಟ್ಟಿ ಅರಣ್ಯ ವಿಕ್ಷಕ ಬಾಬು ಪೂಜಾರಿ ಕಾರ್ಯಾಚರಣೆ ಮಾಡಿ ಮಂಗಳೂರಿನ ಪಶು ವೈದ್ಯರು ಹಾಗೂ ಅರಿವಳಿಕೆ ತಜ್ಞರಾದ ಡಾ. ಯಶಸ್ವಿ ನಾರವಿ, ಡಾ. ಮೇಘನಾ,ಡಾ. ಕೀರ್ತನ ಜೋಶಿ ಸ್ಥಳಕ್ಕೆ ಆಗಮಿಸಿ ಚಿರತೆಗೆ ಅರವಳಿಕೆ ಚುಚ್ಚು ಮದ್ದನ್ನು ನೀಡಿ ಚಿರತೆಯನ್ನು ಸೆರೆ ಹಿಡಿದರು.



