ಕಾರ್ಕಳ: ಏನೇ ಸಾಧಿಸಬೇಕೆಂದಿದ್ದರೆ ಅದಕ್ಕೆ ಶ್ರದ್ಧೆ,ಛಲ,ಪರಿಶ್ರಮ ಕೂಡ ಅಷ್ಟೇ ಮುಖ್ಯ, ಇಲ್ಲೊಬ್ಬಳು ಪರಿಶಿಷ್ಠ ಪಂಗಡದ(ಮರಾಠಿ) ವಿದ್ಯಾರ್ಥಿನಿ ತನ್ನ ಕುಟುಂಬದಲ್ಲಿ ಬಡತನವಿದ್ದರೂ ಆಕೆಯ ಓದಿಗೆ ಅಡ್ಡಿಯಾಗಲಿಲ್ಲ. ಓದೆ ಮುಂದೇನಾದರೂ ಸಾಧಿಸಬೇಕೆಂಬ ಒಂದೇ ಗುರಿಯೊಂದಿಗೆ ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆ ಹುಡುಗಿ 625 ಅಂಕಗಳ ಪೈಕಿ 622 ಅಂಕಗಳನ್ನು ಗಳಿಸಿ ಕಾರ್ಕಳ ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಕಾರ್ಕಳ ತಾಲೂಕಿನ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಧನ್ಯಾ ಎಂಬ ವಿದ್ಯಾರ್ಥಿನಿ ಅಸಾಮಾನ್ಯ ಸಾಧನೆಗೈದು ಪೋಷಕರಿಗೆ ಹಾಗೂ ಕಲಿತ ಶಾಲೆಗೆ ಕೀರ್ತಿ ತಂದಿದ್ದಾಳೆ
ವಿದ್ಯಾರ್ಥಿನಿ ಧನ್ಯಾ ನಾಯ್ಕ್ ತಂದೆ ನರಸಿಂಹ ನಾಯ್ಕ್ ಉಡುಪಿಯ ಹೊಟೇಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆಯ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ನೋಡಿಕೊಂಡಿದ್ದರು. ತಾಯಿ ಸುಲೋಚನ ಗೃಹಿಣಿಯಾಗಿ ಸಂಸಾರದ ಹೊಣೆಗಾರಿಕೆ ನಡುವೆ ಮಗಳು ಧನ್ಯಾಳಿಗೆ ಓದಿಗೆ ಪ್ರೇರಣೆ ನೀಡುತ್ತಿದ್ದರು. ಪರಿಣಾಮವಾಗಿ ಮಗಳು ಧನ್ಯಾ ಉತ್ತಮ ಸಾಧನೆ ಮಾಡಿದ್ದು ಇಂದು ಬಡ ದಂಪತಿಯ ಮೊಗದಲ್ಲಿ ಮಗಳ ಸಾಧನೆ ಕಂಡು ಧನ್ಯತಾಭಾವ ಮೂಡುವಂತಾಗಿದೆ.
ಕಾರ್ಕಳ ತಾಲೂಕು ಕುಕ್ಕುಜೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಓದುತ್ತಿದ್ದ ಧನ್ಯಾ ನಾಯ್ಕ ಅವರೇ ಈ ಸಾಧನೆ ಮಾಡಿದ ಬಾಲಕಿ, ತೀರಾ ಬಡಕುಟುಂಬದಲ್ಲಿ ಜನಸಿದ ಧನ್ಯಾ ಕಲಿತು ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಹರಿಕಂಡಿಗೆ ಸಮೀಪದ ಸಾಂತ್ಯಾರುವಿನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡೇ ಶಾಲೆಗೆ ಹೋಗಿ ಇಂತಹ ಸಾಧನೆ ಮಾಡಿದ್ದಾರೆ.
ಧನ್ಯಾ ತಂದೆ ತಾಯಿಯವರ ಊರು ಹೆಬ್ರಿಯ ಮುಂಡಳ್ಳಿಯಾಗಿದ್ದು, ಮಗಳ ಕಲಿಕೆಗೆ ಅಡ್ಡಿಯಾಗಬಾರದು ಎನ್ನುವ ನಿಟ್ಟಿನಲ್ಲಿ ಧನ್ಯಾಳನ್ನು ಆಕೆಯ ಚಿಕ್ಕಮನ ಮನೆಗೆ ಬಿಟ್ಟಿದ್ದರು.ಧನ್ಯಾ ನಾಯ್ಕ, ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವುದು ಬಾಗಲಕೋಟೆಯಲ್ಲಿ ಪಡೆದು ಬಳಿಕ ಎಂಟನೇ ತರಗತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಇದೀಗ ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿದ್ದಾರೆ. ಧನ್ಯಾ ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿತು ಮುಂದೆ ವೈದ್ಯೆಯಾಗುವ ಕನಸನ್ನು ಹೊಂದಿದ್ದಾಳೆ, ತನ್ನ ಕನಸನ್ನು ನನಸುಮಾಡುವ ಛಲವೂ ಆಕೆಗಿದೆ.