ಬೆಂಗಳೂರು: ಕಾಂಗ್ರೆಸ್ ಘೋಷಿಸಿದ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಜಾರಿಗೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದೆ. ನಾಲ್ಕು ನಿಗಮದೊಂದಿಗೆ ಸಭೆಯನ್ನು ನಡೆಸಲಿರುವ ಅವರು, ಉಚಿತ ಬಸ್ ಪಾಸ್ ಗ್ಯಾರಂಟಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ನಾಳೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ನೇತೃತ್ವದಲ್ಲಿ ನಾಲ್ಕು ಸಾರಿಗೆ ನಿಗಮದ ಮುಖ್ಯಸ್ಥರೊಂದಿಗೆ ಸಭೆಯನ್ನು ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಎಲ್ಲಾ ನಿಗಮದ ಅಧಿಕಾರಿಗಳೊಂದಿಗೂ ಸಚಿವರು, ಬಸ್ ಪಾಸ್ ಸಬ್ಸಿಡಿ ಕುರಿತಂತೆ ಮಹತ್ವದ ಚರ್ಚೆಯನ್ನು ನಡೆಸಲಿದ್ದಾರೆ. ಈ ಬಳಿಕ ಮುಖ್ಯಮಂತ್ರಿಯವರಿಗೆ ಸಭೆಯ ಚರ್ಚೆಯ ವಿಷಯಗಳನ್ನು ಮುಂದಿಡಲಿದ್ದಾರೆ
ಈಗಾಗಲೇ ಸರ್ಕಾರ ಘೋಷಿಸಲು ಹೊರಟಿರುವ ಉಚಿತ ಬಸ್ ಪಾಸ್ ನೀಡಲು ಸಾಧ್ಯವಿಲ್ಲ. ಸರ್ಕಾರದ ಯೋಜನೆಯಾದ್ದರಿಂದ ನಿಗಮಗಳಿಂದ ಹಣ ಭರಿಸಲು ಆಗಲ್ಲ ಎಂಬುದಾಗಿ ಸಿಎಂ ಗಮನಕ್ಕೂ ಸಾರಿಗೆ ನಿಗಮದ ಅಧಿಕಾರಿಗಳು ತಂದಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆಯೂ ನಾಳೆ ನಾಲ್ಕು ಸಾರಿಗೆ ನಿಗಮಗಳ ಹಣಕಾಸಿನ ಸ್ಥಿತಿಗತಿಯ ಬಗ್ಗೆ ಅವಲೋಕಿಸುವ ಸಲುವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.