Share this news

ಬೆಂಗಳೂರು: ಕರ್ನಾಟಕದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂಬ ನಿಟ್ಟಿನಲ್ಲಿ ಗ್ಯಾರಂಟಿ ಎನ್ನುವ ಪ್ರಬಲ ಅಸ್ತ್ರಗಳಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಸಿಎಂ ಬದಲಾವಣೆ ವಿಚಾರ ಬಿಸಿತುಪ್ಪವಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ಬದಲಾವಣೆ, ಐವರು ಉಪ ಮುಖ್ಯಮಂತ್ರಿಗಳ ನೇಮಕ, ದಲಿತ ಮುಖ್ಯಮಂತ್ರಿ ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊಂಡು ಆಂತರಿಕ ಮೇಲಾಟದಲ್ಲಿ ತೊಡಗಿರುವ ಕಾಂಗ್ರೆಸ್ ಬಣ ರಾಜಕಾರಣದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ರಂಗಪ್ರವೇಶ ಮಾಡಿದ್ದು,ಪಕ್ಷದ ಶಿಸ್ತು ಉಲ್ಲಂಘಿಸಿ ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳಲ್ಲಿ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಇದಲ್ಲದೇ, ಇನ್ನು ಮುಂದೆ ಯಾವುದೇ ಬಣದ ನಾಯಕರು ಅಥವಾ ಶಾಸಕರು ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಿದರೆ ಅಥವಾ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಪಕ್ಷದ ವಿವಿಧ ಬಣಗಳ ನಡುವಿನ ಆಂತರಿಕ ಬೇಗುದಿ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬುಧವಾರ ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.


ಈ ಚರ್ಚೆಯ ವೇಳೆ ವಿವಿಧ ಬಣಗಳ ನಾಯಕರು ಹಾಗೂ ಶಾಸಕರು ನೀಡುತ್ತಿರುವ ಹೇಳಿಕೆ, ಲೋಕಸಭಾ ಚುನಾವಣಾ ಸಿದ್ಧತೆ, ಕೆಪಿಸಿಸಿ ಪುನಾರಚನೆ, ಕಾರ್ಯಾಧ್ಯಕ್ಷರ ನೇಮಕ ಹಾಗೂ ನಿಗಮ-ಮಂಡಳಿ ನೇಮಕ ವಿಚಾರಗಳ ಚರ್ಚೆಯಾಗಿವೆ ಎನ್ನಲಾಗಿದೆ.
ಈ ಸಂದರ್ಭ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಪ್ರಮುಖವಾಗಿ ಪಕ್ಷಕ್ಕೆ ಹಾನಿಯಾಗುವ ಹೇಳಿಕೆಗಳನ್ನು ನಿಗ್ರಹಿಸುವಲ್ಲಿ ರಾಜ್ಯ ನಾಯಕರು ಮೌನವಹಿಸಿರುವ ಕುರಿತು ದೆಹಲಿ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹಂತದಲ್ಲಿ ಪಕ್ಷಕ್ಕೆ ಹಾಗೂ ಸರ್ಕಾರದ ವರ್ಚಸ್ಸಿಗೆ ಹಾನಿಯಾಗುವ ಹೇಳಿಕೆಯನ್ನು ತಮ್ಮ ಬೆಂಬಲಿಗರು ನೀಡುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನ ನಾಯಕತ್ವದಿಂದ ಸಮರ್ಪಕವಾಗಿ ನಡೆದಿಲ್ಲ. ಈ ಧೋರಣೆ ಮುಂದುವರೆಯಬಾರದು. ಇನ್ನು ಮುಂದೆ ನಾಯಕ, ಶಾಸಕ, ಸಚಿವ ಅಥವಾ ಪಕ್ಷದ ಕಾರ್ಯಕರ್ತ ಯಾರೇ ಆಗಿದ್ದರೂ ಹೈಕಮಾಂಡ್ ನೇರ ಕ್ರಮಕೈಗೊಳ್ಳಲಿದೆ. ಆಗ ಪಕ್ಷದ ನಾಯಕರು ಹೇಳಿಕೆ ನೀಡಿದವರನ್ನು ರಕ್ಷಿಸುವ ಯತ್ನ ಮಾಡಬಾರದು ಎಂದು ಸೂಕ್ಷ್ಮವಾಗಿ ಹೇಳಿದರು ಎನ್ನಲಾಗಿದೆ. ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲೂ ಇದೇ ಧಾಟಿಯಲ್ಲಿ ಮಾತನಾಡಿದ ಉಸ್ತುವಾರಿ ಸುರ್ಜೇವಾಲಾ ಅವರು, ರಾಜ್ಯದಲ್ಲಿ ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರಗಳನ್ನು ಯಾವುದೇ ಶಾಸಕ, ಸಚಿವ ಅಥವಾ ಪಕ್ಷದ ನಾಯಕರು ಬಹಿರಂಗವಾಗಿ ಮಾತನಾಡುವಂತಿಲ್ಲ. ಒಂದು ವೇಳೆ ಪಕ್ಷದ ಶಿಸ್ತು ಉಲ್ಲಂಘಿಸಿ ಮಾತನಾಡಿದರೆ ಸೂಕ್ತ ಕ್ರಮ ಜರುಗಿಸುತ್ತೇವೆ. ಅಗತ್ಯವಾದರೆ ಈ ಸಂಬಂಧ ವಿಪ್ ಜಾರಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಅಶಿಸ್ತಿನ ಹೇಳಿಕೆಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪಕ್ಷದ ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ, ರಾಜ್ಯದ ಜನರಿಗೆ ಅನುಕೂಲವಾಗುವಂತಹ ನೀತಿಗಳ ಬಗ್ಗೆ ಯೋಚಿಸಿ, ಸಲಹೆ ನೀಡಬೇಕು, ಅಷ್ಟೇ ಅವರ ಜವಾಬ್ದಾರಿ, ಸಚಿವರು ತಮ್ಮ ಇಲಾಖೆ ಹಾಗೂ ಉಸ್ತುವಾರಿ ಜಿಲ್ಲೆಗಳ ಬಗ್ಗೆ ಮಾತ್ರ ಗಮನಹರಿಸಬೇಕು. ಪಕ್ಷದ ಶಿಸ್ತಿನ ರೇಖೆ ಮೀರುವಂತಹ ಇತರೆ ಯಾವುದೇ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಆ ರೀತಿ ಮಾತನಾಡುವುದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಅಶಿಸ್ತಿನ ಹೆಳಿಕೆಗಳನ್ನು ಪಕ್ಷ ಯಾವ ಕಾರಣಕ್ಕೂ ಸಹಿಸುವುದಿಲ್ಲ. ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಯಾರೇ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬ ಕಾರ್ಯಕರ್ತ ಅಥವಾ ನಾಯಕನ ಧ್ವನಿಗೆ ಪಕ್ಷದಲ್ಲಿ ಅವಕಾಶವಿದೆ. ನೀವು ನಿಮ್ಮ ದೂರು, ಸಲಹೆ, ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಅಥವಾ ನನ್ನ ಬಳಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ಹೊರತು ಸಾರ್ವಜನಿಕವಾಗಿ ಅಲ್ಲ ಎಂದು ಖಡಕ್ ಧ್ವನಿಯಲ್ಲಿ ಹೇಳಿದರು.

ಅಧಿಕಾರ ಹಂಚಿಕೆ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಅದನ್ನೇ ಪದೇ ಪದೇ ಹೇಳುತ್ತಿದ್ದೇನೆ. ಅಧಿಕಾರ ಹಂಚಿಕೆಯ ಬಗ್ಗೆ ಚರ್ಚಿಸುವ ಅಧಿಕಾರ ಶಾಸಕರು, ಸಚಿವರಿಗೆ ಇಲ್ಲ. ಅದು ಅವರ ವ್ಯಾಪ್ತಿಗೆ ಬರುವುದಿಲ್ಲ. ಅವರ ಸಲಹೆಗಳು ಇದ್ದರೆ ಪಕ್ಷದ ವೇದಿಕೆಯಲ್ಲಿ ನೀಡಬಹುದು. ಅವರ ಮಿತಿಗಳನ್ನು ಅರಿತು ರಾಜ್ಯದ ಅಭಿವೃದ್ಧಿ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಬೇಕು ಎಂದರು.

 

 

 

 

 

 

 

 

Leave a Reply

Your email address will not be published. Required fields are marked *