Share this news

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ನೀಡಿರುವ ಹೇಳಿಕೆಯ ವಿಡಿಯೋ ಸಿ.ಡಿಯನ್ನು ಒದಗಿಸುವಂತೆ ಪ್ರಕರಣದ ದೂರುದಾರರಾದ ನಮಿತಾ ಕೆ.ಪೂಜಾರಿ ಅವರಿಗೆ ಹೈಕೋರ್ಟ್‌ ಸೂಚಿಸಿದೆ.
ಈ ಪ್ರಕರಣದ ಕುರಿತಂತೆ ತಮ್ಮ ವಿರುದ್ಧ ಬೆಳ್ತಂಗಡಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಶಾಸಕ ಹರೀಶ್‌ ಪೂಂಜಾ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠ ಈ ಸೂಚನೆ ನೀಡಿದೆ. ಅರ್ಜಿದಾರರ ಪರ ವಕೀಲರು, ಶಾಸಕ ಹರೀಶ್‌ ಪೂಂಜಾ ಅವರು ನೀಡಿದ ಹೇಳಿಕೆಯಿಂದ ಯಾವುದೇ ಹಿಂಸಾಚಾರ ಅಥವಾ ಶಾಂತಿಭಂಗ, ಕೋಮು ಸೌಹಾರ್ದತೆಗೆ ಧಕ್ಕೆಯಾದ ಪ್ರಕರಣ ನಡೆದಿಲ್ಲ. ರಾಜಕೀಯ ಪ್ರೇರಿತ, ದುರುದ್ದೇಶ ಮತ್ತು ದ್ವೇಷಭಾವನೆಯಿಂದ ದೂರು ದಾಖಲಿಸಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿದರು.
ಅದನ್ನು ಆಕ್ಷೇಪಿಸಿದ ದೂರುದಾರೆ ಪರ ವಕೀಲರು, ಅರ್ಜಿದಾರರು ನೀಡಿರುವ ಹೇಳಿಕೆ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಿದೆ. ಶಾಸಕ ಹರೀಶ್‌ ಪೂಂಜಾ ನೀಡಿರುವ ಹೇಳಿಕೆಯ ವಿಡಿಯೋ ಸಿ.ಡಿ ತಮ್ಮ ಬಳಿ ಇದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಮಯಾವಕಾಶ ನೀಡಬೇಕು ಎಂದು ಕೋರಿದರು. ಈ ಮನವಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಸಿಡಿ ಒದಗಿಸಲು ಕಾಲಾವಕಾಶ ನೀಡಿ ವಿಚಾರಣೆಯನ್ನು ಡಿ.8 ಕ್ಕೆ ಮುಂದೂಡಿತು.

ಏನಿದು ಪ್ರಕರಣ:

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಶಾಸಕ ಹರೀಶ್‌ ಪೂಂಜಾ ಅವರಿಗೆ ಅಭಿನಂದನೆ ಸಲ್ಲಿಸಲು ಬಿಜೆಪಿ ಪಕ್ಷದಿಂದ ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನ ಜೈನ್‌ ಪಟೇಲ್‌ ಸಭಾಂಗಣದಲ್ಲಿ 2023 ರ ಮೇ 22 ರಂದು ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ್ದ ಹರೀಶ್‌ ಪೂಂಜಾ, 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಮತ ಕೇಳಿದ್ದೀರಲ್ಲಾ ಎಂದು ಪ್ರಶ್ನಿಸಿದ್ದರು. ಹಿಂದೂ ಹುಡುಗಿಯನ್ನು ಪ್ರೀತಿಸಿದ್ದ ಮುಸ್ಲಿಂ ಹುಡುಗನಿಗೆ ಹಿಂದೂ ಹುಡುಗನೊಬ್ಬ ಹಲ್ಲೆ ಮಾಡಿದ್ದ. ಗೋವುಗಳನ್ನು ಸಾಗಿಸುತ್ತಿದ್ದವರಿಗೆ ಹಿಂದೂ ಯುವಕರನ್ನು ತಡೆದು ಹಲ್ಲೆ ಮಾಡಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ನಾನು ಠಾಣೆಗೆ ಹೋಗಿ ಅವರ ಮೇಲೆ ಪ್ರಕರಣ ದಾಖಲಿಸದೇ ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *