Share this news

ಬೆಂಗಳೂರು: ಸಂಘಟಿತ ಪ್ರಯತ್ನದ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ದಿಗ್ಗಜರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಹುದ್ದೆ ಅಧಿಕಾರಾವಧಿಗಾಗಿ ಭರ್ಜರಿ ಚೌಕಾಸಿ ನಡೆದಿದ್ದು, ಇದು ನಾಡಿನ ಮುಂದಿನ ದೊರೆಯ ಆಯ್ಕೆಯನ್ನು ಕಗ್ಗಂಟು ಮಾಡಿದೆ. ಪಕ್ಷವು ಭಾರಿ ಬಹುಮತ ಪಡೆಯಲು ತಮ್ಮ ಕೊಡುಗೆಯನ್ನು ಮುಂದಿಟ್ಟುಕೊಂಡು ಉಭಯ ನಾಯಕರು ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ. 

ಶಾಸಕರ ಅಭಿಪ್ರಾಯ ಸಂಗ್ರಹದ ಹೊರತಾಗಿಯೂ ತಮ್ಮನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಈ ನಾಯಕರು ತಾವು ಹಿಡಿದಿರುವ ‘ಉಡದ ಪಟ್ಟನ್ನು’ ಸಡಿಲಿಸಲು ಸುತಾರಾಂ ತಯಾರಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಹೈಕಮಾಂಡ್‌ ಮಧ್ಯಪ್ರವೇಶ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. 

 ಶಾಸಕರ ಬೆಂಬಲ ತಮ್ಮೊಂದಿಗೆ ಇದೆ ಎಂಬ ಅಚಲ ನಂಬಿಕೆ ಹೊಂದಿರುವ ಸಿದ್ದರಾಮಯ್ಯ, ಸಂಪ್ರದಾಯದಂತೆ ನೂತನ ಶಾಸಕರು ಹೊಸ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿ. ಹೀಗೆ ಆಯ್ಕೆಯಾದ ಶಾಸಕಾಂಗ ಪಕ್ಷದ ನಾಯಕ ಅರ್ಥಾತ್‌ ಮುಖ್ಯಮಂತ್ರಿಗೆ ಪರಿಪೂರ್ಣ ಅವಧಿ ಅಂದರೆ ಐದು ವರ್ಷಗಳ ಅಧಿಕಾರ ನೀಡಬೇಕು ಎಂಬ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ನಾನು ಮುಖ್ಯಮಂತ್ರಿಯಾದರೆ ಡಿ.ಕೆ. ಶಿವಕುಮಾರ್‌ ಡಿಸಿಎಂ ಹುದ್ದೆ ಪಡೆದು ಪ್ರಮುಖ ಖಾತೆಗಳನ್ನು ಹೊಣೆ ಹೊರಬಹುದು. ತನ್ಮೂಲಕ ಶಿವಕುಮಾರ್‌ ಅವರ ಕೊಡುಗೆಗೂ ನ್ಯಾಯ ಸಿಗುತ್ತದೆ. ಆದರೆ, ಶಿವಕುಮಾರ್‌ ಬೇಡಿಕೆಯಂತೆ ಅವರನ್ನೇ ಮುಖ್ಯಮಂತ್ರಿ ಮಾಡಿದರೆ ನನಗೆ ಯಾವ ಹುದ್ದೆಯನ್ನೂ ನೀಡಲು ಸಾಧ್ಯವಿಲ್ಲ. ಹೀಗಾದಾಗ ನನ್ನ ನಾಯಕತ್ವ ನಂಬಿ ಪಕ್ಷವನ್ನು ಬೆಂಬಲಿಸಿದ ಸಮುದಾಯಗಳು ಬೇಸರಗೊಳ್ಳಬಹುದು. ಹೀಗಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಅವರು ನಿಲ್ಲಬಹುದು’ ಎಂಬ ವಾದ ಸಿದ್ದರಾಮಯ್ಯ ಅವರದ್ದಾಗಿದೆ ಎನ್ನಲಾಗಿದೆ.

ಆದರೆ, ಈ ವಾದವನ್ನು ಒಪ್ಪಲು ಶಿವಕುಮಾರ್‌ ಸಿದ್ಧರಿಲ್ಲ. ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ಎದುರಿಸಿರುವುದರಿಂದ ಸಂಪ್ರದಾಯದಂತೆ ನನಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬ ಪ್ರಬಲ ವಾದ ಮಂಡನೆ ಮಾಡಿದ್ದಾರೆ. ಏಕೆಂದರೆ, ‘1999ರಲ್ಲಿ ಎಸ್‌.ಎಂ. ಕೃಷ್ಣ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿದ್ದರಿಂದ ಅವರೇ ಮುಖ್ಯಮಂತ್ರಿ ಆಗಿದ್ದರು. ನಂತರ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿಲ್ಲ, 2013ರಲ್ಲಿ ಡಾ.ಜಿ. ಪರಮೇಶ್ವರ್‌ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿದ್ದರೂ ಅವರು ಗೆದ್ದಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಯಾಗಲಿಲ್ಲ. ಆದರೆ, ಈ ಬಾರಿ ನನ್ನ ಅಧ್ಯಕ್ಷತೆಯಲ್ಲೇ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಹೀಗಾಗಿ ಹುದ್ದೆಗೆ ನಾನು ಅರ್ಹ’ ಎಂಬುದು ಡಿಕೆಶಿ ವಾದ.

Leave a Reply

Your email address will not be published. Required fields are marked *