Share this news

ಹೆಬ್ರಿ : ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ, ಹರಿದಾಸ, ಜಿನದಾಸ, ತಾಳಮದ್ದಳೆ ಅರ್ಥದಾರಿ, ನಾಟಕಕಾರ, ಪ್ರಸಂಗಕರ್ತ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಚಾಣಕ್ಯ ಎಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಹೆಬ್ರಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಕಾರ್ಕಳ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಬಹುಮುಖ ಪ್ರತಿಭೆ ಸೀಮಾ ಕಾಮತ್ ಅವರು ಆಯ್ಕೆಯಾಗಿದ್ದಾರೆ.

ಬಹುಮುಖ ಪ್ರತಿಭೆಯ ಶಿಕ್ಷಕಿ ಸೀಮಾ ಕಾಮತ್:
ಶಿಕ್ಷಣ ಸಂಸ್ಥೆಯಲ್ಲಿ ಉತ್ತಮವಾದ ಶಿಕ್ಷಕರಿದ್ದರೆ ಸುಸಂಸ್ಕೃತ ಪ್ರಜೆಗಳನ್ನು ಹೊಂದಿದ ರಾಷ್ಟದ ನಿಮಾ9ಣ ಸಾಧ್ಯ. ರಾಷ್ಟದ ನಿರ್ಮಾಣವೆಂದರೆ ಕೇವಲ ಗಗನಚುಂಬಿ ಕಟ್ಟಡಗಳ ನಿರ್ಮಾಣವಲ್ಲ. ನಿಜವಾದ ಅರ್ಥದಲ್ಲಿ ರಾಷ್ಟನಿರ್ಮಾಣವೆಂದರೆ ಮೌಲ್ಯಯುತವಾದ ಪ್ರಜೆಗಳ ನಿರ್ಮಾಣವೇ ಆಗಿದೆ. ಈ ಹೊಣೆಯನ್ನು ಹೊತ್ತು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಕ್ಷಕರು, ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ಕೊಡೊಯ್ಯುವವರೇ ನಿಜವಾದ ಉತ್ತಮ ಶಿಕ್ಷಕರು.ಒಬ್ಬ ವಿದ್ಯಾರ್ಥಿಯ ಜೀವನಯಾನದ ಬದುಕಿಗೆ ಆದರ್ಶವಾಗಿ, ದಡ ಸೇರಲು ನಾವಿಕನಾಗಿ, ಸನ್ಮಾರ್ಗದ ಚಾಲಕನಾಗಿ, ಅಜ್ಞಾನದ ಕತ್ತಲೆಯಲ್ಲಿ ಬೆಳದಿಂಗಳಾಗಿ, ಜ್ಞಾನದಾಹಿಗಳಿಗೆ ಅಕ್ಷರದಾಸೋಹಿಯಾಗಿ, ಸಾಧನೆಯ ಕಿರೀಟಕ್ಕೆ ಸೂರ್ತಿಯ ನೆಲೆಯಾಗಿ, ಭರವಸೆಯ ಬಾಳಿಗೆ ಮಾಲಕನಾಗಿ, ಆದರ್ಶಕ್ಕೆ ನಾಯಕನಾಗಿ, ನಡೆಯುವವನೇ ಉತ್ತಮ ಶಿಕ್ಷಕ. ಅಂತಹ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡು ಸಭ್ಯ ಸಮಾಜ ನಿರ್ಮಾಣ ಕಾರ್ಯದಲ್ಲಿ ಬಹುಮುಖ ಪ್ರತಿಭೆಯ ಶಿಕ್ಷಕಿ ಸೀಮಾ ಕಾಮತ್ ಅವರು ತೊಡಗಿಸಿಕೊಂಡಿದ್ದಾರೆ. ಎಂ.ಎ, ಬಿ.ಎಡ್ ಪದವೀಧರರಾಗಿರುವ ಇವರು ಸಂಗೀತ, ಯಕ್ಷಗಾನ, ತಾಳಮದ್ದಲೆ, ಕಥೆ, ಕವನ,ಅಭಿನಯಗೀತೆ, ರಂಗೋಲಿ, ಚಿತ್ರಕಲೆ, ನೃತ್ಯ, ಸಾಹಿತ್ಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭಾಸಂಪನ್ನರು. ಪ್ರತಿಭಾ ಕಾರಂಜಿ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ಬಹುಮಾನ ಪೆಡೆಯುವಲ್ಲಿ ಇವರ ಶ್ರಮ ಬಹಳವಾದುದು.

ಉತ್ತಮ ಬರಹಗಾರರಾಗಿರುವ ಸೀಮಾ ಕಾಮತ್ ಮೂರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಪ್ರತಿಭಾನ್ವಿತ ಲೇಖಕರಾಗಿ ಗುರುತಿಸಿಕೊಂಡು ಬರವಣೆಗೆಯ ಕ್ಷೇತ್ರದಲ್ಲೂ ಕೈಚಾಚಿದ್ದಾರೆ. ಶ್ಯೆಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ಮಿಂಚುತ್ತಿರುವ ಇವರ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯು ಸೇರಿ ವಿವಿಧ ಸಂಘ ಸಂಸ್ಥೆಗಳದ ಪ್ರಶಸ್ತಿ, ಗೌರವ, ಅಭಿನಂದನೆಗಳನ್ನು ಪಡೆದಿದ್ದಾರೆ.

ಚಾಣಕ್ಯ ಸಂಸ್ಥೆ ಕಳೆದ 4 ವರ್ಷಗಳಿಂದ ಶಿಕ್ಷಣ ಮಾತ್ರವಲ್ಲದೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿವಿಧ ವೇದಿಕೆಗಳಲ್ಲಿ ಆವಕಾಶ ಕಲ್ಪಿಸುವುದರ ಜತೆಗೆ ಪತ್ರಿಕೆ ಹಾಗೂ ಟಿ.ವಿ.ಮಾಧ್ಯಮಗಳಲ್ಲಿ ಪ್ರತಿಭೆಯ ಅನಾವರಣ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಚಾಣಕ್ಯ ಸಂಸ್ಥೆ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣದ ಜತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಕೊಂಡು ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಶ್ರಮಿಸುತ್ತಿರುವ ಉಡುಪಿ ಜಿಲ್ಲೆಯ ಶಿಕ್ಷಕರನ್ನು ಕಳೆದ ವರ್ಷದಿಂದ ಗುರುತಿಸಿ ಶಿಕ್ಷಣದ ಜತೆ ಸಾಂಸ್ಕೃತಿಕ, ಸಾಹಿತ್ಯ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ಹೆಸರಾಂತ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ನೆನಪಿನಲ್ಲಿ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಸೆ.5ರಂದು ಸಂಜೆ 4ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದ್ದು ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *