ಹೆಬ್ರಿ : ಶಿಕ್ಷಕರು ಸಮಾಜದ ಆಸ್ತಿ. ಸಮಾಜದ ಭದ್ರ ಅಡಿಪಾಯ ಅಂದರೆ ಅದು ಶೈಕ್ಷಣಿಕ ಕ್ಷೇತ್ರ.ವಿದ್ಯಾರ್ಥಿ ಬದುಕಿನ ಬದಲಾವಣೆಯ ಹರಿಕಾರ ಶಿಕ್ಷಕರು.ಕೇವಲ ನಾಲ್ಕು ಗೋಡೆಗಳ ಒಳಗೆ ಸೀಮಿತವಾಗಿರದೆ ಪಠ್ಯಕ್ರಮ ಹೊರತುಪಡಿಸಿ ವಿಭಿನ್ನವಾಗಿ ಯೋಚಿಸುವ ಭವಿಷ್ಯದ ಪ್ರಜೆಗಳನ್ನು ತಯಾರು ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಅವಿಭಜಿತ ಜಿಲ್ಲೆಯ ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಹೇಳಿದರು.
ಅವರು ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹೆಸರಾಂತ ಸಾಹಿತಿ ಶಿಕ್ಷಕ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಕೊಡಮಾಡುವ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕಾರ್ಕಳ ಭುವನೇಂದ್ರ ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕಿ ಸೀಮಾ ಕಾಮತ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಹಿರಿಯ ಸಾಹಿತಿ ಅಂಬಾತನಯ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿಗೆ ವಿಶೇಷ ಮೌಲ್ಯವಿದೆ. ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಗುರುತಿಸುವ ಚಾಣಕ್ಯ ಸಂಸ್ಥೆಯ ಸಮಾಜ ಮುಖಿ ಚಿಂತನೆ ಶ್ಲಾಘನೀಯ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೀಮಾ ಕಾಮತ್, ಹೆಸರಾಂತ ಸಾಹಿತಿ ಅಂಬಾತನಯರ ನೆನಪಿನಲ್ಲಿ ನೀಡುವ ಮೊದಲ ಪ್ರಶಸ್ತಿ ನನಗೆ ಸಿಕ್ಕಿರುವುದು ನನ್ನ ಭಾಗ್ಯ.ಶಿಕ್ಷಕರು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸಮಾಜ ಗುರುತಿಸುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ.ನಿರಂತರವಾಗಿ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವ ಚಾಣಕ್ಯದ ಶೈಕ್ಷಣಿಕ ಕಾಳಜಿ ಮಾದರಿಯಾಗಿದೆ.ಅನುದಾನಿತ ಶಾಲೆಯ ಶಿಕ್ಷಕರನ್ನು ಗುರುತಿಸುವ ಚಾಣಕ್ಯ ಸಂಸ್ಥೆಗೆ ಶುಭವನ್ನು ಕೋರುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ವೀಣಾ ಯು.ಶೆಟ್ಟಿ ವಹಿಸಿದ್ದರು.
ಅಂಬಾತನಯ ಮುದ್ರಾಡಿ ಅವರ ಪುತ್ರ ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಸನತ್ ಕುಮಾರ್ ಅವರನ್ನು ಗೌರವಿಸಲಾಯಿತು. ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ ಹೆಬ್ರಿ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜೇಸಿಐ ಹೆಬ್ರಿ,ಉಷಾ ಮೆಡಿಕಲ್ ,ಲಯನ್ಸ್ ಕ್ಲಬ್ ಹೆಬ್ರಿ ಇವರ ಸಹಯೋಗದೊಂದಿಗೆ
ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ , ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠ್ಠಲ ಶೆಟ್ಟಿ,ಹೆಬ್ರಿ ಜೇಸಿಐ ಅಧ್ಯಕ್ಷ ಪ್ರವೀಣ್ ಶೆಟ್ಟಿ ,ಹೆಬ್ರಾಯ್ ಅಧ್ಯಕ್ಷ ದಿನಕರ್ ಪ್ರಭು,ಹೆಬ್ರಿ ಸಿಟಿ ಲಯನ್ಸ್ ಅಧ್ಯಕ್ಷ ರಘುರಾಮ ಶೆಟ್ಟಿ ,ಲಯನ್ಸ್ ಪ್ರಮುಖ ಟಿ.ಜಿ.ಆಚಾರ್ಯ , ಜೇಸಿರೆಟ್ ಅಧ್ಯಕ್ಷೆ ಅನಿತಾ ಪಿ.ಶೆಟ್ಟಿ , ಚಾರ ನವೋದಯ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ದಿನೇಶ್ ,ಸೀಮಾ ಕಾಮತ್ ಅವರ ತಾಯಿ ಉಷಾ ಬಾಳಿಗ ,ನಿತ್ಯಾನಂದ ಭಟ್,ಸುಬ್ರಹ್ಮಣ್ಯ ಕಂಗಿನಾಯ, ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಉದಯ ಶೆಟ್ಟಿ ಸ್ವಾಗತಿಸಿ,ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ್ ಭಟ್ ಕಾರ್ಯಕ್ರಮ ನಿರೂಪಿಸಿದರು.