Share this news

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಣ್ಯ ವಲಯದ ಅಜ್ಜಾವರ ಸಮೀಪದ ಪೆಡ್ಡಂಬೈಲು ಎಂಬಲ್ಲಿ ಚಿರತೆಯೊಂದು ಬಲೆಗೆ ಸಿಲುಕಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಪೆಡ್ಡಂಬೈಲು ನಿವಾಸಿಗಳಾದ ಜಯರಾಮ ರೈ (41) ಮತ್ತು ಪೃಥ್ವಿ ರಾಜ್ (32) ಬಂಧಿತರು.

ಕೃಷಿ ಜಮೀನಿನಲ್ಲಿ ಚಿರತೆ ಸತ್ತಿದೆ ಎಂದು ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಕರ್ನಾಟಕ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39 ಮತ್ತು 51 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ. ಪ್ರತಿದಿನ ತಮ್ಮ ಬೆಳೆಗಳನ್ನು ನಾಶಪಡಿಸುತ್ತಿರುವ ಕಾಡುಹಂದಿಗಳನ್ನು ಹಿಡಿಯಲು ರೈತರು ತಮ್ಮ ಭತ್ತದ ಗದ್ದೆಗಳ ಬೇಲಿಗಳಿಗೆ ಬಲೆ ಹಾಕಿದ್ದರು. ಆಗಸ್ಟ್ 28 ರ ರಾತ್ರಿ ಎರಡು ವರ್ಷದ ಚಿರತೆಯೊಂದು ಬಲೆಗೆ ಸಿಕ್ಕಿಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ. ಘಟನೆಯ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಬಳಿಕ ಹತ್ತಿರದ ಹಳ್ಳಿಯೊಂದರಲ್ಲಿ ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಹಲವು ತಿಂಗಳುಗಳಿAದ ಕಾಡುಹಂದಿಗಳ ಹಾವಳಿಯಿಂದ ಬೇಸತ್ತಿದ್ದು, ಈ ಕುರಿತಾಗಿ ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ರೈತರು ದೂರಿದ್ದಾರೆ. ಹಿಂಡು ಹಿಂಡಾಗಿ ಪ್ರತಿದಿನ ಬರುವ ಕಾಡುಹಂದಿಗಳು ನಾವು ಬೆಳೆದ ಬೆಳೆಗಳನ್ನು ಸಂಫೂರ್ಣವಾಗಿ ನಾಶಮಾಡುತ್ತಿವೆ. ಇಷ್ಟೇ ಅಲ್ಲದೆ, ಕಾಡಾನೆಗಳ ಹಾವಳಿಯನ್ನು ಸಹ ಎದುರಿಸಬೇಕಾದ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುಳ್ಯ ತಾಲೂಕಿನಲ್ಲಿ ಚಿರತೆಗಳು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿಲ್ಲ ಮತ್ತು ಆರೋಪಿಗಳಿಗೆ ಚಿರತೆಯನ್ನು ಕೊಲ್ಲುವ ಯಾವ ಉದ್ದೇಶವಿರಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಮಂಜುನಾಥ್ ಹೇಳಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *