ದಾವಣಗೆರೆ: ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ನ್ಯಾಯಾಂಗ ವ್ಯವಸ್ಥೆಯಡಿ ತನಿಖೆ ಕೈಗೊಂಡು, ನ್ಯಾಯ ಕೊಡಿಸಬೇಕು. ನ್ಯಾಯ ಸಿಗದಿದ್ದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯೇ ನ್ಯಾಯ ಕೊಡಿಸುತ್ತಾರೆ ಎಂದು ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಆದರೆ, ಕಳೆದ 11 ವರ್ಷದಲ್ಲಿ ನ್ಯಾಯ ಪೀಠದಲ್ಲಿ ನ್ಯಾಯ ಸಿಗುವುದಿಲ್ಲವೆಂಬAತಾಗಿದೆ. ಸೌಜನ್ಯಾ ಮತ್ತು ಆಕೆಯ ಕುಟುಂಬಕ್ಕೆ ದೈವದ ನ್ಯಾಯವಾದರೂ ಸಿಗಲಿದೆ. ಸೌಜನ್ಯಾ ಪ್ರಕರಣದಲ್ಲಿ ಸಂತೋಷ್‌ರಾವ್ ಆರೋಪಿಯಾಗಿ 6 ವರ್ಷ ಜೈಲು ಶಿಕ್ಷೆ ಅನುಭವಿಸಿ, ಈಗ 11 ವರ್ಷದ ನಂತರ ನಿರ್ದೋಷಿಯೆಂದು ಹೊರ ಬಂದಿದ್ದಾರೆ. ಹಾಗಾದರೆ ಸೌಜನ್ಯಾ ಪ್ರಕರಣದ ನಿಜವಾದ ಅಪರಾಧಿಗಳು ಯಾರು? ಸೌಜನ್ಯಾಳನ್ನು ಒಬ್ಬರಲ್ಲ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ನ್ಯಾಯ, ಧರ್ಮದೇವತೆ ಜಾಗದಲ್ಲಿ ಈ ಘಟನೆ ಆಗಿದೆ ಎಂದರು.
ಭೂಮಿ, ರಸ್ತೆ, ನೀರು, ಹೆಣ್ಣಿಗಾಗಿ ಅಲ್ಲಿ ಸಾವಿರಾರು ಕಾನೂನು ಬಾಹಿರ ಕೃತ್ಯಗಳಾಗಿವೆ. ಆದರೆ, ಒಂದೇ ಒಂದು ಎಫ್‌ಐಆರ್ ಸಹ ದಾಖಲಾಗುವುದಿಲ್ಲ. ಅಲ್ಲಿನ ಎಸಿ, ಡಿಸಿ ನ್ಯಾಯಾಲಯ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶ ಮಾಡಿದರೂ, ಹೈಕೋರ್ಟ್ ಸೂಚನೆ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲ್ಲ. ಸೌಜನ್ಯಾ ಪ್ರಕರಣದ ನಿಜವಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.
ಸೌಜನ್ಯಾನ ಸಾಮೂಹಿಕ ಅತ್ಯಾಚಾರ ಎಸಗಿದ ನಿಜವಾದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗದಿದ್ದರೂ, ಅಣ್ಣಪ್ಪ ಸ್ವಾಮಿಯಂತೂ ಸುಮ್ಮನೆ ಬಿಡುವುದಿಲ್ಲ. ಕಡೆಗೊಂದು ದಿನ ಅತ್ಯಾಚಾರಿ, ಹಂತಕರು ಮಾನಸಿಕ ಅಸ್ವಸ್ಥರಾಗಿ ತಾವೇ ಅತ್ಯಾಚಾರ, ಕೊಲೆ ಮಾಡಿದ್ದು ಎಂಬುದಾಗಿ ಹೇಳಿ ಸುತ್ತುವ ದಿನಗಳೂ ಬರುತ್ತವೆ. ಶೀಘ್ರದಲ್ಲೇ ದಾವಣಗೆರೆಯಲ್ಲೂ ಹೋರಾಟ ಶುರು ಮಾಡಲಿದ್ದು, ರಾಜ್ಯವ್ಯಾಪಿ ಪ್ರತಿಭಟಿಸಲಿದ್ದೇವೆ ಎಂದರು.