Share this news

ಕಾರ್ಕಳ: ಉಜಿರೆಯ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಮ್ಮ ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದೆ. ಸೌಜನ್ಯ ಅತ್ಯಾಚಾರ ಹಾಗೂ ಕೊಲೆಯ ವಿಚಾರದಲ್ಲಿ ಆಕೆಯ ಕುಟುಂಬಕ್ಕೆ ಖಂಡಿತವಾಗಿಯೂ ನ್ಯಾಯ ಸಿಗಬೇಕು,ಆರೋಪಿಗಳ ವಿರುದ್ಧ ಕಠಿಣಕ್ರಮವಾಗಬೇಕು,
ನ್ಯಾಯಪರ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವೂ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೌಜನ್ಯಪರ ಹೋರಾಟವನ್ನು ದಿಕ್ಕುತಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹಾಗೂ ಉದಯಕುಮಾರ್ ಹೆಗ್ಡೆ ಎರ್ಲಪಾಡಿ ಕಾರ್ಕಳದ ಹೊಟೇಲ್ ಪ್ರಕಾಶ್ ನಲ್ಲಿ ಶನಿವಾರ ಜಂಟೀ ಸುದ್ದಿಗೋಷ್ಟಿಯಲ್ಲಿ‌ ಮಾತನಾಡಿ, ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವ ವಿಚಾರದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ
ಯಾವುದೋ ಒಂದು ಕುಟುಂಬದವರ ಮೇಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಯಾವುದೇ ದಾಖಲೆಯಿಲ್ಲದೇ ಸುಳ್ಳು ಆರೋಪಗಳನ್ನು ಮಾಡುವುದರ ಜತೆಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಬಹಳ ಬೇಸರದ ವಿಷಯ. ಸೌಜನ್ಯಳಿಗೆ ನ್ಯಾಯಾಲಯದ ಮೂಲಕ ನ್ಯಾಯ ಸಿಗಬೇಕೆನ್ನುವುದು ಎಲ್ಲರ ಉದ್ದೇಶವಾಗಿದೆ.

ಆದರೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಕೆಲವರು ನ್ಯಾಯಾಲಯದಲ್ಲಿ ಮರುತನಿಖೆಗೆ ಮನವಿ ಸಲ್ಲಿಸದೇ ಊರೂರು ಸುತ್ತಿಕೊಂಡು ದುರುದ್ದೇಶದಿಂದ ಸಭೆಯನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈಗಾಗಲೇ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ ಜಡ್ಜ್ ನ್ಯಾಯಾಲಯದಲ್ಲಿ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡದಂತೆ ನಿರ್ಬಂಧಕಾಜ್ಞೆ ಜಾರಿಯಾಗಿರುತ್ತದೆ. ಆದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೇ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರು ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಆದ್ದರಿಂದ ನವೆಂಬರ್ 24 ರಂದು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ತಂಡ ಕಾರ್ಕಳದ ಕುಕ್ಕುಂದೂರಿನಲ್ಲಿ ಆಯೋಜಿಸಿರುವ ಸಮಾಜಘಾತುಕ ಹಾಗೂ ಸಾಕ್ಷಾಧಾರಗಳಿಲ್ಲದೇ ಮಾತನಾಡುವ ಸಾರ್ವಜನಿಕ ಸಭೆಯನ್ನು ನಾಗರಿಕರು ಬಹಿಷ್ಕರಿಸಬೇಕೆಂದು ಕಾರ್ಕಳ ಶ್ರೀ ಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ ಮನವಿ ಮಾಡಿದೆ.


ನಮ್ಮೆಲ್ಲರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ತೇಜೋವಧೆ ಮಾಡುವಂತಹ ಮಾತುಗಳನ್ನು ಸಾರ್ವಜನಿಕ ಸಭೆಗಳಲ್ಲಿ ಬಹಿರಂಗವಾಗಿ ಭಾಷಣದ ಮೂಲಕ ಅಥವಾ ಮಾಧ್ಯಮದ ಮೂಲಕ ಜನಸಾಮಾನ್ಯರಲ್ಲಿ ಗೊಂದಲ ಉಂಟುಮಾಡುವುದು ಎಷ್ಟು ಸರಿ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಜೊತೆಗೆ ಧರ್ಮಗಳ ಮಧ್ಯೆ ವೈಮನಸ್ಸು ದ್ವೇಷ ಹುಟ್ಟಿಕೊಳ್ಳುತ್ತದೆ. ಕಾರ್ಕಳದ ಜನತೆಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎನ್ನುವ ಭಾವನೆ ಇದೆ. ಆದರೆ ಅದು ನ್ಯಾಯಮಾರ್ಗದಲ್ಲಿ ಮಾತ್ರ ದೊರಕಲು ಎಂಬ ಸತ್ಯ ಕೂಡ ತಿಳಿದಿದೆ. ಆದರೆ ಸೌಜನ್ಯ ಹೋರಾಟದ ನೆಪದಲ್ಲಿ ಕಾರ್ಕಳದಲ್ಲಿ ಶಾಂತಿಯನ್ನು ಕೆಡಿಸಿ ಅಶಾಂತಿಯನ್ನು ಸೃಷ್ಟಿಸುವ ಹುನ್ನಾರವನ್ನು ಕಾರ್ಕಳದ ಜನತೆ ವಿರೋಧಿಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ ಈ ಮೂಲಕ ವಿನಂತಿಸಿದೆ.
ಸುದ್ದಿಗೋಷ್ಟಿಯಲ್ಲಿ ಸುಧಾಕರ ಶೆಟ್ಟಿ ಮುಡಾರು,ಕಮಲಾಕ್ಷ ಪ್ರಭು,ಅಂತೋನಿ ಡಿಸೋಜ, ಯಶೋಧಾ ಶೆಟ್ಟಿ,ಸುಭಾಶ್ಚಂದ್ರ ಚೌಟ, ಹರಿಶ್ಚಂದ್ರ ತೆಂಡುಲ್ಕರ್,ಸುರೇಶ್ ಶೆಟ್ಟಿ ಶಿವಪುರ, ಮಹೇಶ್ ಕುಪ್ಪೆಕಲ್ಲು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *