Share this news

ಇತ್ತೀಚೆಗೆ ಧರ್ಮಸ್ಥಳದ ಮೃತ ಕು. ಸೌಜನ್ಯಾ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಆರೋಪಿ ಸಂತೋಷ್ ರಾವ್ ಇವರನ್ನು ನಿರ್ದೋಷಿ ಎಂದು ಘೋಷಿಸಿದೆ. ಈ ಪ್ರಕರಣಕ್ಕೆ 11 ವರ್ಷ ಕಳೆದರೂ ಸಹ ನಿಜವಾದ ಆರೋಪಿಗಳ ಬಂಧನ ಆಗದಿರುವುದು ದುರದೃಷ್ಟಕರ ವಿಷಯವಾಗಿದೆ. ಇದು ಕಾನೂನು ಸುವ್ಯವಸ್ಥೆಯು ವಿಫಲವಾಗಿರುವುದರ ಲಕ್ಷಣವಾಗಿದೆ. ಈಗ ರಾಜ್ಯದಲ್ಲಿ ಮೃತ ಸೌಜನ್ಯಾಳ ಪ್ರಕರಣವು ಮರುತನಿಖೆಯಾಗಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಆದರೆ ಈ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಅನೇಕ ಎಡಪಂಥೀಯರು ಮತ್ತು ಅನ್ಯ ಸಮುದಾಯದ ಸಂಘಟನೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿರುವುದು ಗಮನಕ್ಕೆ ಬರುತ್ತಿದ್ದು, ಇದನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸಿದೆ.

ಉದಾಹರಣೆಗೆ ಕನ್ನಡ ನಟ ದುನಿಯಾ ವಿಜಯ ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಾಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ‘ಸೌಜನ್ಯಾ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ ಎಂದು ಹೇಳಿದ್ದಾರೆ. ನಟ ಪ್ರಕಾಶ ರಾಜ್ ಇವರು ಸೌಜನ್ಯ ಪ್ರಕರಣದಲ್ಲಿ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಮಂಪರು ಪರೀಕ್ಷೆ ಮಾಡಬೇಕೆಂದು ಹೇಳಿದ್ದಾರೆ.ನಟ ವಿನೋದ್ ಟೈಗರ್ ಪ್ರಭಾಕರ್ ಸೌಜನ್ಯ ಸಾವಿಗೆ ನ್ಯಾಯ ಸಿಗುವವರೆಗೂ ನಾನು ಧರ್ಮಸ್ಥಳಕ್ಕೆ ಹೋಗುವುದಿಲ್ಲ ಹೇಳಿದ್ದಾರೆ. ನಟ ಚೇತನ್ ಅಹಿಂಸಾ ಈ ಪ್ರಕರಣದಲ್ಲಿ ಧರ್ಮಸ್ಥಳದ ಶಕ್ತಿಗಳು ಮೌನವಾಗಿರುವುದೇಕೆ ? ಅವರು ಅಪರಾಧದಲ್ಲಿ ತಮ್ಮದೆ ಆದ ಪಾಲ್ಗೊಳ್ಳುವಿಕೆಯನ್ನು ಮರೆಮಾಡುತ್ತಾರೆಯೇ ? ಎಂದು ಪ್ರಶ್ನಿಸಿದ್ದಾರೆ. ಒಡನಾಡಿ ಕ್ರೈಸ್ತ ಸಂಘಟನೆಯ ಸಂಸ್ಥಾಪಕ ಸ್ಟ್ಯಾನ್ಲಿ ಧರ್ಮಸ್ಥಳವನ್ನು ಹಂದಿಯ ಹಾಗೆ ಹೊಡೆಯಬೇಕು ಎಂಬ ಹೇಳಿಕೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹರಿದಾಡುತ್ತಿದೆ. ಕ್ಯಾಥೊಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಯಾರು ಸಹ ಚರ್ಚ್ ಗುರಿ ಮಾಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಮಾತ್ರ ಹಿಂದೂಗಳಲ್ಲದವರು ಸಹ ಹಿಂದೂಗಳ ಪವಿತ್ರ ಕ್ಷೇತ್ರವನ್ನು ಗುರಿ ಮಾಡುತ್ತಿದ್ದಾರೆ.

ಕೇವಲ ಕರ್ನಾಟಕ ರಾಜ್ಯದಲ್ಲಿಯೇ ಇಸವಿ 2019 ರಿಂದ 2021 ರ 3 ವರ್ಷಗಳ ಕಾಲಾವದಿಯಲ್ಲಿ 40,000 ಬಾಲಕಿಯರು, ಮಹಿಳೆಯರು ನಾಪತ್ತೆಯಾಗಿದ್ದಾರೆ. ಯಾಕೆ ಎಲ್ಲ ಪ್ರಕರಣಗಳ ಮೇಲೆ ತನಿಖೆಯನ್ನು ಮಾಡಲಿಲ್ಲ. ಧರ್ಮಸ್ಥಳದ ಬಗ್ಗೆ ಮಾತನಾಡುವ ಹಿಂದುಯೇತರರು ಈ ಎಲ್ಲ ಪ್ರಕರಣಗಳ ಬಗ್ಗೆ ಏಕೆ ಮೌನ ? ಧರ್ಮಸ್ಥಳವನ್ನೇ ಗುರಿ ಮಾಡುವುದು ಏಕೆ ? ಒಟ್ಟಾರೆ ಈ ಎಲ್ಲ ಘಟನೆಗಳನ್ನು ಗಮನಿಸಿದಾಗ ಕು. ಸೌಜನ್ಯಾ ಪ್ರಕರಣವನ್ನು ನೆಪಮಾಡಿಕೊಂಡು ಹಿಂದೂ ವಿರೋಧಿಗಳು ಧರ್ಮಸ್ಥಳವನ್ನು ಗುರಿ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ.

Leave a Reply

Your email address will not be published. Required fields are marked *