Share this news

ಕಾರ್ಕಳ: ಧರ್ಮಸ್ಥಳ ಗ್ರಾಮದ ಪಾಂಗಾಳ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣದ ದಿಕ್ಕುತಪ್ಪಲು ಸರ್ಕಾರಗಳು ಹಾಗೂ ಪೊಲೀಸ್ ಇಲಾಖೆಯೇ ನೇರಹೊಣೆ.ಅಂದು ಅಧಿಕಾರಿಗಳು ಆಡಳಿತ ವ್ಯವಸ್ಥೆ ಮಾಡಿದ ತಪ್ಪಿನಿಂದ ಪ್ರಕರಣದ ನಡೆದು 13 ವರ್ಷಗಳಾದರೂ ಬಾಲಕಿ ಸೌಜನ್ಯಾಳಿಗೆ ನ್ಯಾಯ ಸಿಕ್ಕಿಲ್ಲ.ಆದರೆ ನಾವು ನ್ಯಾಯಕ್ಕಾಗಿ ಮತ್ತೆ ಕೋರ್ಟಿಗೆ ಹೋಗುವುದಿಲ್ಲ, ಬೀದಿಯಲ್ಲೇ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುವುದಾಗಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗುಡುಗಿದರು.

ಅವರು ಕಾರ್ಕಳದಲ್ಲಿ ಭಾನುವಾರ ಸೌಜನ್ಯಾ ಪರ ನ್ಯಾಯಕ್ಕಾಗಿ ನಡೆದ ಜನಾಂದೋಲನ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವರು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ವಿಧಾನಸೌಧ ಹಾಗೂ ಧರ್ಮಸ್ಥಳಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಶಾಂತಿಯುತವಾಗಿ ನಡೆಸುವ ಹೋರಾಟವನ್ನು ಕ್ರಾಂತಿಯುತ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

 

ದಲಿತ ಮುಖಂಡ ಶ್ರೀನಿವಾಸ ಎಸ್ ಮಿಜಾರು ಮಾತನಾಡಿ,ಪ್ರತಿಭಟನೆ ನಡೆಸುವುದಕ್ಕೆ ಅಡ್ಡಿಪಡಿಸುವ ಪ್ರಯತ್ನ ಮಾಡಬೇಡಿ ಒಂದು ವೇಳೆ ಅಡ್ಡಗಾಲು ಹಾಕಿದರೆ ಇದರ ಪರಿಣಾಮ‌ ಎದುರಿಸಬೇಕಾದೀತು ಎಂದು ಎಚ್ಚರಿಸಿದ ಅವರು, ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಗೆ 5 ಗ್ಯಾರಂಟಿ ಕೊಟ್ಟಿದ್ದೀರಿ ಅದೇರೀತಿ‌ ಸೌಜನ್ಯಳಿಗೂ ನ್ಯಾಯ ಭಾಗ್ಯ ಕೊಡಿ ಎಂದು ಮನವಿ ಮಾಡಿದರು.

ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಡಾ.ಪಿ.ಮೂರ್ತಿ ಮಾತನಾಡಿ,ಅಮಾಯಕ ಹುಡುಗಿ ಸೌಜನ್ಯಳನ್ನು ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಕ್ಕೆ ನ್ಯಾಯ ಒದಗಿಸಲು ನಡೆಯುವ ಹೋರಾಟ ಯಾರ ವಿರುದ್ದವೂ ಅಲ್ಲ ಇದು ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವ ಹೋರಾಟ ಎಂದರು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು, ಸಿದ್ದರಾಮಯ್ಯ ನವರೇ ನಿಮ್ಮ ಸರ್ಕಾರ ಉಳಿಯಬೇಕಿದ್ದರೆ ಪ್ರಕರಣದ ಮರುತನಿಖೆ ನಡೆಸಬೇಕೆಂದು ಎಚ್ಚರಿಸಿದರು.ಅಧಿಕಾರ,ಹಣ ಬಳಸಿ ಹೋರಾಟಗಾರರನ್ನು ಸದೆಬಡಿಯಬಹುದು ಎನ್ನುವ ಭ್ರಮೆ ಇದ್ದರೆ ಅದನ್ನು ಬಿಟ್ಟುಬಿಡಿ ಎಂದು ಡಾ.ಮೂರ್ತಿ ಎಚ್ಚರಿಸಿದರು.

ಹೋರಾಟಗಾರ್ತಿ ಪ್ರಸನ್ನ ರವಿ ಮಾತನಾಡಿ, ನೀವು ಪ್ರಾಮಾಣಿಕರಾಗಿದ್ದರೆ, ನಿಮ್ಮ ಕುಟುಂಬದ ಸದಸ್ಯರನ್ನು ಅಣ್ಣಪ್ಪ ಹಾಗೂ ಮಂಜುನಾಥನ ಮುಂದೆ ನಿಲ್ಲಿಸಬೇಕಿತ್ತು. ನೀವು ಹೈಕೋರ್ಟ್ ಗೆ ಹೋಗುತ್ತೀರಿ ಅಂದರೆ ನಿಮಗೆ ಮಂಜುನಾಥ ಅಣ್ಣಪ್ಪನ ಮೇಲೆ ನಂಬಿಕೆ ಇಲ್ಲ ಎಂದಾಯಿತು.ನನ್ನ ಸುಪ್ರೀಂ ಕೊರ್ಟ್ ಮಂಜುನಾಥ ಹಾಗೂ ಅಣ್ಣಪ್ಪ ದೇವರು, ನಿಮಗೆ ಯಾಕೆ ಭಯ ಎಂದು ಪ್ರಶ್ನಿಸಿದರು‌.ಕುಂಬಳಕಾಯಿ ಕಳ್ಳ ಎನ್ನುವಂತೆ ಭಯದಿಂದ ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿರುವ ಉದ್ದೇಶ ಏನಿತ್ತು. ತಪ್ಪೇ ಮಾಡಿಲ್ಲ ಎಂದಾದರೆ ನ್ಯಾಯಾಲಯದ ತಡೆಯಾಜ್ಞೆ ಯಾಕೆ ತರಬೇಕು ಎಂದು ಪ್ರಸನ್ನ ರವಿ ಪ್ರಶ್ನಿಸಿದರು.

ಇದೇವೇಳೆ ಸೌಜನ್ಯಾಳ ತಾಯಿ ನ್ಯಾಯಕ್ಕಾಗಿ ಸಾರ್ವಜನಿಕರ ಮುಂದೆ ಗದ್ಗದಿತರಾಗಿ ಸೆರಗೊಡ್ಡಿ ದಯನೀಯವಾಗಿ ಬೇಡುವ ದೃಶ್ಯ ಮನಕಲಕುವಂತಿತ್ತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹೋರಾಟಗಾರರಾದ ತಮ್ಮಣ್ಣ ಶೆಟ್ಟಿ,ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ್,ಸಂಧ್ಯಾ ಪವಿತ್ರಾ ನಾಗರಾಜ್, ನರಸಿಂಹ ಮುಂತಾದವರು ಉಪಸ್ಥಿತರಿದ್ದರು‌

Leave a Reply

Your email address will not be published. Required fields are marked *