Share this news

ಕಾರ್ಕಳ : ಧರ್ಮಸ್ಥಳ ಸಮೀಪ ಹನ್ನೊಂದು ವರ್ಷಗಳ ಹಿಂದೆ ಭೀಕರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಸೌಜನ್ಯಾ ಎಂಬ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕೆನ್ನುವುದು ನಿರ್ವಿವಾದ. ನ್ಯಾಯಕ್ಕಾಗಿ ನಡೆಯುವ ಸಂವಿಧಾನ ಬದ್ಧವಾದ, ನ್ಯಾಯಪರವಾದ ಮತ್ತು ಸುಸಂಸ್ಕೃತವಾದ ಎಲ್ಲ ಹೋರಾಟಗಳನ್ನು ಬಿಜೆಪಿ ಬೆಂಬಲಿಸುತ್ತದೆ. ಈ ನಿಟ್ಟಿನಲ್ಲಿ ಯಾರೇ ಹೋರಾಟ ಮಾಡಿದರೂ ಬಿಜೆಪಿ ಅದನ್ನು ಸಮರ್ಥಿಸುತ್ತದೆ. ಆದರೆ ಸೌಜನ್ಯಾ ಪರ ಹೋರಾಟ ಬೀದಿ ರಂಪವಾಗದಿರಲಿ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹೇಳಿದ್ದಾರೆ.

ಸೌಜನ್ಯಾಗೆ ನ್ಯಾಯ ದೊರಕಿಸಿಕೊಡುವ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟವನ್ನು ನೋಡುವಾಗ ಹಲವು ಅನುಮಾನಗಳು ಹುಟ್ಟುತ್ತವೆ. ಸದ್ಯದ ಹೋರಾಟ ದಿಕ್ಕುತಪ್ಪಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ಹೋರಾಟದ ಮುಂಚೂಣಿಯಲ್ಲಿ ಕಮ್ಯುನಿಷ್ಟರು ಕಾಣಿಸಿಕೊಂಡ ಬಳಿಕ ಸೌಜನ್ಯಾ ಎಂಬ ನತದೃಷ್ಟ ಹೆಣ್ಣುಮಗಳು ಅವರಿಗೊಂದು ನೆಪಮಾತ್ರ. ಅವರ ಉದ್ದೇಶ ಬೇರೆಯೇ ಇದೆ ಎನ್ನುವ ಅನುಮಾನ ಕಾಡುತ್ತಿದೆ. ಸೌಜನ್ಯಾ ಹೋರಾಟ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಹೋರಾಟದ ಹೆಸರಿನಲ್ಲಿ ದೇವರಿಲ್ಲ, ಅಣ್ಣಪ್ಪನಿಲ್ಲ, ಧರ್ಮಸ್ಥಳಕ್ಕೆ ಜೆಸಿಬಿ ನುಗ್ಗಿಸುತ್ತೇವೆ ಎಂದೆಲ್ಲ ಹೇಳುತ್ತಿರುವವರ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ.

ಸದ್ಯ ಸೌಜನ್ಯಾ ಹೋರಾಟ ಎಡಪಂಥೀಯ ಮತ್ತು ಬಲಪಂಥೀಯ ಆಯಾಮ ಪಡೆದುಕೊಂಡಿರುವುದು ದುರದೃಷ್ಟಕರ. ನಾವೂ ಹಿಂದುತ್ವವಾದಿಗಳು, ಹಿಂದು ಧರ್ಮ ರಕ್ಷಣೆ ನಮ್ಮ ಉದ್ದೇಶ, ಹಿಂದುತ್ವಕ್ಕೆ ಧಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಮೈಕ್ ಸಿಕ್ಕಿದಾಗಲೆಲ್ಲ ಅಬ್ಬರಿಸುವವರು ಇನ್ನೊಂದೆಡೆ ಅದೇ ಹಿಂದುತ್ವವನ್ನು ಸೌಜನ್ಯಾ ಹೋರಾಟದ ನೆಪದಲ್ಲಿ ಟೀಕಿಸುವಾಗ, ಅಪಹಾಸ್ಯ ಮಾಡುವಾಗ ಚಕಾರ ಎತ್ತಿಲ್ಲ. ಅವರ ಈ ದ್ವಂದ್ವ ನಿಲುವು ನಮಗೆ ಅನುಮಾನವುಂಟು ಮಾಡುತ್ತಿದೆ ಎಂದಿದ್ದಾರೆ.

ಸೌಜನ್ಯಾಳನ್ನು ಕೊಂದವರು ಯಾರು ಎನ್ನುವುದು ನನಗೆ ಗೊತ್ತಿದೆ. ಈಗ ಅದನ್ನು ಹೇಳಿದರೆ ನನ್ನನ್ನೂ ಸಾಯಿಸಬಹುದು ಎಂದು ಮಾಜಿ ಶಾಸಕರೊಬ್ಬರು ಪತ್ರಿಕಾಗೋಷ್ಠಿ ಕರೆದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕೊಂದದ್ದು ಯಾರು ಎನ್ನುವುದು ಗೊತ್ತಿದೆ ಎಂದವರು 11 ವರ್ಷ ಮೌನವಾಗಿದ್ದದ್ದು ಏಕೆ? ಹೋಗಲಿ ಈಗಲಾದರೂ ಅವರು ಅದನ್ನು ಬಹಿರಂಗಪಡಿಸಬಹುದಲ್ಲ. ಜೀವ ಬೆದರಿಕೆ ಇದ್ದರೆ ರಕ್ಷಣೆ ಕೊಡುವುದು ಸರಕಾರದ ಕರ್ತವ್ಯ. ಹೋರಾಟ ಮಾಡುವವರು ಇನ್ನೂ ಯಾಕೆ ಅಪರಾಧಿಗಳ ಹೆಸರು ಬಹಿರಂಗಪಡಿಸಿ ಎಂದು ಅವರ ಮೇಲೆ ಒತ್ತಡ ಹೇರಿಲ್ಲ. ಅವರು ಹೇಳಿದವರೇ ಅಪರಾಧಿಗಳು ಎಂದು ಸಾಬೀತಾದರೆ ಈ ಕೇಸು ಅಲ್ಲಿಗೆ ಮುಗಿದುಹೋಗುತ್ತದೆ. ಸೌಜನ್ಯಾಳಿಗೆ ನ್ಯಾಯ ಸಿಗುತ್ತದೆ. ನಿಮ್ಮ ಹೋರಾಟವೂ ಸಾರ್ಥಕವಾಗುತ್ತದೆ. ಪಕ್ಕದಲ್ಲೇ ಅಪರಾಧಿಗಳು ಯಾರು ಎಂದು ನನಗೆ ಗೊತ್ತಿದೆ ಎಂದು ಹೇಳುವವರನ್ನು ಇಟ್ಟುಕೊಂಡು ಹೋರಾಟ ಮಾಡುವುದು ಬೂಟಾಟಿಕೆ ಎಂದು ಅನ್ನಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇಷ್ಟಕ್ಕೂ ಹೋರಾಟ ಎಂದರೆ ಏನು? ವೇದಿಕೆಯಲ್ಲಿ ನಿಂತು ಅಬ್ಬರಿಸುವುದು, ಮಾಧ್ಯಮದವರನ್ನು ಅವಮಾನಿಸುವುದು,ಪೊಲೀಸ್ ಇಲಾಖೆಯನ್ನು ರಾಜಕಾರಣಿಗಳನ್ನು ಬೇಕಾಬಿಟ್ಟಿ ಮಾತನಾಡುವುದಷ್ಟೇ ಹೋರಾಟವೇ? ಕಾನೂನಾತ್ಮಕವಾಗಿ ನೀವು ಇಷ್ಟರ ತನಕ ಏನು ಮಾಡಿದ್ದೀರಿ ಎಂಬುದನ್ನು ಜನರ ಮುಂದಿಡಬೇಕಲ್ಲವೆ? ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅದಕ್ಕೆ ಅನಗತ್ಯವಾಗಿರುವವರನ್ನು ಎಳೆದು ತಂದು ವಿವಾದಗಳನ್ನು ಸೃಷ್ಟಿಸುತ್ತಿರುವುದು ಏಕೆ? ಪ್ರಧಾನಿ ಮೋದಿಯವರಿಗೂ ಈ ಪ್ರಕರಣಕ್ಕೂ ಯಾವ ರೀತಿಯ ಸಂಬAಧವಿದೆ? ಹೋರಾಟಗಾರರು ಬಿಜೆಪಿ ನಾಯಕರನ್ನು, ಜನಪ್ರತಿನಿಧಿಗಳನ್ನು ಕಂಡಕAಡಲೆಲ್ಲ ಅಪಹಾಸ್ಯ ಮಾಡುವುದು ಏಕೆ? ಹೋರಾಟಕ್ಕೆ ಕಮ್ಯನಿಷ್ಟರನ್ನು ಕರೆದು ತರುವ ಅಗತ್ಯ ಏನಿತ್ತು? ಕಮ್ಯುನಿಸ್ಟ್ ತತ್ವ ಸಿದ್ಧಾಂತ ಯಾವತ್ತೂ ದೈವ ದೇವರುಗಳ ಮೇಲೆ ನಂಬಿಕೆ ಇಟ್ಟಿಲ್ಲ. ಅವರು ಈ ಹೋರಾಟದಲ್ಲಿ ಶಾಮೀಲಾಗಿದ್ದಾರೆ ಎಂದರೆ ಇದರಲ್ಲಿ ಯಾವುದೋ ಷಡ್ಯಂತ್ರ ಇದೆ ಎನ್ನುವುದು ನಿಶ್ಚಿತ. ಬಹುಶಃ ಮುಂದಿನ ಲೋಕಸಭೆ ಚುನಾವಣೆಯೇ ಅವರ ಗುರಿಯಾಗಿರಬಹುದು. ಬ್ರಿಟಿಷರು ಕೂಡ ಇಂಥದ್ದನ್ನೇ ಮಾಡಿ ಹಿಂದುಗಳನ್ನು ಒಡೆದಿದ್ದರು. ಕಮ್ಯುನಿಷ್ಟರು ಇದೇ ತಂತ್ರವನ್ನು ಸ್ವಾತಂತ್ರ‍್ಯ ಬಂದ ಬಳಿಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹೋರಾಟ ಹೆಸರಿನಲ್ಲಿ ನಡೆಸುವ ಬೀದಿ ರಂಪಾಟದಿAದ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಹೋರಾಟಕ್ಕೆ ಅದರದ್ದೇ ಆದ ವಿಧಾನವಿದೆ. ಯಾವುದೇ ಹೋರಾಟ ಈ ನೆಲದ ಕಾನೂನು ಮತ್ತು ಸಂಸ್ಕೃತಿಗೆ ಅನುಗುಣವಾಗಿರಬೇಕು. ಜನ ಸೇರಿಸಿ ಅಬ್ಬರಿಸಿವುದಷ್ಟೇ ಹೋರಾಟವಲ್ಲ. ಹೋರಾಟಗಾರು ಇನ್ನೂ ಕೂಡ ಸರಕಾರ ಮೇಲೆ ಒತ್ತಡ ತರುವ ಗಂಭೀರವಾದ ಯಾವ ಕ್ರಮವನ್ನೂ ಅನುಸರಿಸಿಲ್ಲ. ಸರಕಾರವೇ ಮರುತನಿಖೆ ಮಾಡುವುದಿಲ್ಲ ಎಂದಾಗಲೂ ಗಟ್ಟಿ ನಿಲುವು ವ್ಯಕ್ತಪಡಿಸಿಲ್ಲ. ನಿಮಗೆ ನಿಜವಾಗಿಯೂ ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಕಾಳಜಿ ಇದ್ದರೆ ಸರಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಿ. ಅದನ್ನು ಬಿಜೆಪಿ ಪೂರ್ಣ ಮನಸ್ಸಿನಿಂದ ಬೆಂಬಲಿಸುತ್ತದೆ. ಇದನ್ನು ನಾವು ಸಾವಿರ ಸಲ ಹೇಳುತ್ತೇವೆ. ಇದರ ಬದಲು ಹೋರಾಟದ ನೆಪದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ ಎಂದು ಮಹಾವೀರ ಹೆಗ್ಡೆ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *