ಬೆಂಗಳೂರು: ಗ್ರಾಮಗಳಲ್ಲಿ ನಡೆಯುವ ಸಣ್ಣಪುಟ್ಟ ವ್ಯಾಜ್ಯಗಳು ಗ್ರಾಮಗಳಲ್ಲೇ ಬಗೆಹರಿಯಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಶೀಘ್ರದಲ್ಲೇ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅ.2ರಂದು ಹಮ್ಮಿಕೊಂಡಿದ್ದ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸ್ವಚ್ಚ ಸರ್ವೇಕ್ಷಣಾ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಬ್ದುಲ್ ನಜೀರ್ ಸಾಬ್ ಅವ ರಿದ್ದಾಗ ಗ್ರಾಮ ನ್ಯಾಯಾಲಯಗಳ ಬಗ್ಗೆ ಪ್ರಸ್ತಾವಿಸಿದ್ದರು. ಈಗ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರೂ ಗ್ರಾಮ ನ್ಯಾಯಾಲಯಗಳ ಸ್ಥಾಪನೆ ಬಗ್ಗೆ ಪ್ರಸ್ತಾವಿಸುತ್ತಲೇ ಇದ್ದಾರೆ. ಗ್ರಾಮ ಮಟ್ಟದ ವ್ಯಾಜ್ಯಗಳು ಸ್ಥಳೀಯ ಮಟ್ಟದಲ್ಲೇ ಬಗೆಹರಿಯಬೇಕೆನ್ನುವುದು ಸರ್ಕಾರದ ಆಶಯವಾಗಿದೆ.ಈ ನಿಟ್ಟಿನಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ಎಂದರು.
2008ರಲ್ಲಿ ರಾಷ್ಟ್ರೀಯ ಕಾನೂನು ಆಯೋಗವು ಗ್ರಾಮ ನ್ಯಾಯಾ ಲಯಗಳನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಕಾಯ್ದೆಯೊಂದನ್ನು ತರಲಾಗಿದ್ದು, ರಾಷ್ಟ್ರಪತಿಗಳ ಅಂಕಿತ ಬೀಳಬೇಕಿದೆ. ರಾಜ್ಯದಲ್ಲಿ 2 ಅಥವಾ 3 ಗ್ರಾ.ಪಂ.ಗಳಿಗೆ ಒಂದು ಗ್ರಾಮ ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾವನೆ ಇದೆ. ಈ ಪ್ರಕಾರ ಹಂತ ಹಂತವಾಗಿ ಸರಿಸುಮಾರು 2 ಸಾವಿರ ಗ್ರಾಮ ನ್ಯಾಯಾಲಯಗಳು ರಚನೆಯಾಗ ಲಿದ್ದು,ಇದರಿಂದ ಸ್ಥಳೀಯ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಗ್ರಾಮಸ್ಥರು ನಗರಗಳಿಗೆ ಅಲೆದಾಡುವುದು ತಪ್ಪಲಿದೆ ಜತೆಗೆ ತ್ವರಿತಗತಿಯಲ್ಲಿ ನ್ಯಾಯ ಸಿಗಬೇಕೆನ್ನುವ ಉದ್ದೇಶ ವಾಗಿದೆ. ಯಾವುದೇ ಪ್ರಕರಣವನ್ನು 3ಕ್ಕಿಂತ ಹೆಚ್ಚು ಬಾರಿ ಮುಂದೂಡಬಾರದು,ಗರಿಷ್ಠ 6 ತಿಂಗಳೊಳಗಾಗಿ ಇತ್ಯರ್ಥ ಪಡಿಸಬೇಕು, ಈ ಮೂಲಕ ಗ್ರಾಮ ಗಳನ್ನು ವ್ಯಾಜ್ಯ ಮುಕ್ತ ಮಾಡಬೇಕು ಎಂಬ ದೂರದೃಷ್ಟಿಯನ್ನು ಇರಿಸಿಕೊಳ್ಳಲಾಗಿದೆ ಎಂದರು.
ಮಹಾತ್ಮಗಾಂಧಿಜೀ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಹ ಗ್ರಾಮ ಸ್ವರಾಜ್ಯ ಮತ್ತು ಅಧಿಕಾರ ವಿಕೇಂದ್ರೀಕರಣ ಆಶಯ ಹೊಂದಿದ್ದರು.ಅದರಂತೆ ರಾಜ್ಯ ಸರಕಾರವು ಗ್ರಾಮ ನ್ಯಾಯಾಲಯಗಳ ಸ್ಥಾಪಿಸುವ ಚಿಂತನೆ ಇಟ್ಟುಕೊಂಡಿದ್ದು, ಇದರಿಂದ ಗ್ರಾಮಸ್ಥರಿಗೆ ಬಹಳ ಅನುಕೂಲ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಮಹಾತ್ಮ ಗಾಂಧಿ ಅವರ ಕನಸಿನ ಅಧಿಕಾರ ವಿಕೇಂದ್ರೀಕರಣ ಮತ್ತು ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದವರು ರಾಜೀವ್ ಗಾಂಧಿ.ಜತೆಗೆ, ಅಧಿಕಾರ ವಿಕೇಂದ್ರಕರಣ ಗಾಂಧಿಯವರ ಕನಸಾಗಿತ್ತು. ಇದರಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಂಬಿದ್ದರು. ಹೀಗಾಗಿ ಗ್ರಾಮ ಸ್ವರಾಜ್ಯವನ್ನು ಪ್ರತಿಪಾದಿಸಿದರು ಎಂದು ಅವರು ಉಲ್ಲೇಖಿಸಿದರು.