ಮುಲ್ಕಿ: ಕಳೆದ ಕೆಲ ದಿನಗಳಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಳಪೇಟೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಳೆಯಂಗಡಿ ಗ್ರಾಮ ಪಂಚಾಯತ್ ನ ಒಳಪೇಟೆಯಲ್ಲಿ ಹಿಂಡು ಹಿಂಡಾಗಿ ಬೀದಿ ನಾಯಿಗಳು ತಿರುಗಾಡುತ್ತಿದ್ದು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿದೆ.
ಕಳೆದ ಕೆಲ ಸಮಯದ ಹಿಂದೆ ಹುಚ್ಚು ನಾಯಿ ಕಾಟದಿಂದಾಗಿ ಕೆಲವರಿಗೆ ಹುಚ್ಚು ನಾಯಿ ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಬೀಡಾಡಿ ನಾಯಿಗಳಿಂದಾಗುವ ತೊಂದರೆಯ ಕುರಿತು ಸ್ಥಳೀಯರಾದ ಛಾಯಾಗ್ರಹಕ ಮೋಹನ್ ಭಟ್ ಪಂಚಾಯಿತ್ ಹಾಗೂ ಪ್ರಾಣಿ ದಯಾ ಸಂಘಕ್ಕೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇನ್ನಾದರೂ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಪಟ್ಟವರು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.














