Share this news

ಮಂಗಳೂರು : ಹಿಂದೂ ಸಮುದಾಯದಲ್ಲಿ ಆತಂಕ ಹುಟ್ಟಿಸಲೆಂದೇ ಪ್ರವೀಣ್ ನೆಟ್ಟಾರು ಹತ್ಯೆ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

ಮಂಗಳೂರಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ  ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.  ಹಿಂದೂ ಸಮುದಾಯದವರಲ್ಲಿ ಆತಂಕ ಹುಟ್ಟಿಸಲೆಂದೇ ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿತ್ತು. ಈ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರೇ ನಡೆಸಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳದಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 

ದ‌.ಕ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಹತ್ಯೆ ನಡೆದಿತ್ತು. ಪ್ರಕರಣದಲ್ಲಿ ಎನ್‌ಐಎ ಒಟ್ಟು 20 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ನಿನ್ನೆ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ, 153ಎ, 302, 34, 1967ರ ಕಾನೂನುಬಾಹಿರ ಚಟುವಟಿಕೆ ತಡೆ (ಯುಎಪಿ) ಕಾಯ್ದೆಯ ಸೆಕ್ಷನ್ 16, 18 ಮತ್ತು 20 ಸಶಸ್ತ್ರ ಕಾಯ್ದೆಯ ಸೆಕ್ಷನ್ 25 (1) (ಎ) ಅಡಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. 

ಆರೋಪಿಗಳಾದ 20 ಜನರಲ್ಲಿ 15 ಜನರ ಬಂಧನವಾಗಿದ್ದು, 5 ಮಂದಿ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳಲ್ಲಿ ನಾಲ್ಕನೇ ಆರೋಪಿ ಮುಸ್ತಾಫಾ ಪೈಚಾರು, ಆರನೇ ಆರೋಪಿ ಕೊಡಾಜೆ ಮೊಹಮ್ಮದ್ ಷರೀಫ್, ಐದನೇ ಆರೋಪಿ ಮಸೂದ್ ಕೆ.ಎ, ಏಳನೇ ಆರೋಪಿ ಅಬೂಬಕ್ಕರ್ ಸಿದ್ದಿಕ್ ಹಾಗೂ 20ನೇ ಆರೋಪಿ ತುಫಾಯಿಲ್ ಎಂ.ಎಚ್. ತಲೆಮರೆಸಿಕೊಂಡಿದ್ದಾರೆ. ಇವರ ಕುರಿತು ಸುಳಿವು ನೀಡಿದವರಿಗೆ ಎನ್‌ಐಎ ಬಹುಮಾನ ಘೋಷಣೆ ಮಾಡಿದೆ. ಎನ್.ಐ.ಎ 1500 ಪುಟಗಳ ಸುದೀರ್ಘ ಚಾರ್ಜ್ ಶೀಟ್  ಸಲ್ಲಿಕೆ ಮಾಡಿದೆ‌. 240 ಸಾಕ್ಷಿದಾರರ ಹೇಳಿಕೆ  ಇರುವ ಬೃಹತ್ ಚಾರ್ಜ್ ಶೀಟ್ ಇದಾಗಿದೆ.

Leave a Reply

Your email address will not be published. Required fields are marked *