ಅಲಹಾಬಾದ್:ಭಾರತೀಯ ಪುರಾತತ್ವ ಇಲಾಖೆಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಆರಂಭಿಸಲು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ,ಈ ಮೂಲಕ ಮಸೀದಿ ಸಮೀಕ್ಷೆ ಕುರಿತಂತೆ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳ ವಾದಕ್ಕೆ ಆರಂಭಿಕ ಹಂತದ ಮುನ್ನಡೆ ಸಿಕ್ಕಿದೆ
ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಗುರುವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ (ವುಜುಖಾನಾ ಹೊರತುಪಡಿಸಿ) ನಡೆಸಲು ಕೋರ್ಟ್ ಅನುಮತಿ ನೀಡಿದೆ.
ವಾರಣಾಸಿ ನ್ಯಾಯಾಲಯದ ತೀರ್ಪು ಸಮರ್ಥನೀಯವಾಗಿದೆ. ನ್ಯಾಯದ ನಡುವೆ ವೈಜ್ಞಾನಿಕ ಸಮೀಕ್ಷೆಯ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಜ್ಞಾನವಾಪಿ ಮಸೀದಿ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ ಮತ್ತು ಹಿಂದೂ ಕಕ್ಷಿದಾರರು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಈ ಹಿಂದೆ ಇದೇ ಸ್ಥಳದಲ್ಲಿ ದೇವಾಲಯ ಅಸ್ತಿತ್ವದಲ್ಲಿತ್ತೇ ಎಂದು ನಿರ್ಧರಿಸಲು ಪುರಾತತ್ವ ಇಲಾಖೆಯ ಸಮೀಕ್ಷೆಯ ಅಗತ್ಯವಿದೆ ಎಂದು ವಾದಿಸಿದ್ದರು. ಪುರಾತತ್ವ ಇಲಾಖೆಯ ಸಮೀಕ್ಷೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ನಂತರ, ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಯ ನೀಡಿದ ನಂತರ ಮಸೀದಿ ಸಮಿತಿಯು ಹೈಕೋರ್ಟ್ ಗೆ ಮೊರೆ ಹೋಯಿತು. ವಿಚಾರಣೆಯ ಸಮಯದಲ್ಲಿ, ವೈಜ್ಞಾನಿಕ ಸಮೀಕ್ಷೆಯು ಮಸೀದಿಗೆ ಹಾನಿ ಮಾಡುತ್ತದೆ ಎಂದು ಮಸೀದಿ ಸಮಿತಿ ಹೇಳಿದೆ. ಸಮಿತಿಯ ಪರ ವಕೀಲರಾದ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ ಅವರು ವಾರಣಾಸಿ ನ್ಯಾಯಾಲಯದ ಜುಲೈ 21 ರ ಆದೇಶವನ್ನು ತಳ್ಳಿಹಾಕುವಂತೆ ಹೈಕೋರ್ಟ್ ಮನವಿ ಮಾಡಿದರು.
ಮುಸ್ಲಿಮ್ ಸಮಿತಿ ಪರವಾಗಿ ವಾದಿಸಿದ ವಕೀಲರು, ಪ್ರಮುಖವಾಗಿ ಗ್ಯಾನವಾಪಿ ಮಸೀದಿ ಸಮೀಕ್ಷೆ ಹೆಸರಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆ ತರಲಾಗುತ್ತದೆ ಎಂದು ವಾದಿಸಿದ್ದರು. ಇಲ್ಲಿ ಉತ್ಕನನ ನಡೆಸಲಾಗುತ್ತದೆ. ಇದರಿಂದ ಮಸೀದಿ ಮೂಲಸ್ವರೂಪಕ್ಕೆ ಧಕ್ಕೆಯಾಗಲಿದೆ. ಮಸೀದಿಯಲ್ಲಿ ಪೋಟೋಗ್ರಫಿ, ವಿಡಿಯೋಗ್ರಫಿಗೆ ಆಕ್ಷೇಪವಿಲ್ಲ. ಸಮೀಕ್ಷೆ ಹೆಸರಲ್ಲಿ ಮಸೀದಿ ಗೋಡೆಯೊಂದನ್ನು ಈಗಾಗಲೇ ಕೆಡವಲಾಗಿದೆ. ಹೀಗಾಗಿ ಸಮೀಕ್ಷೆಗೆ ತಕ್ಷಣವೇ ತಡೆ ನೀಡಬೇಕು ಎಂದು ಮುಸ್ಲಿಂ ಸಮಿತಿ ಪರ ವಕೀಲರು ವಾದ ಮಂಡಿಸಿದ್ದರು.
ಇತ್ತ ಹಿಂದೂ ಪರ ವಾದ ಮಂಡಿಸಿದ ವಕೀಲರು, ಕೆಲ ಆರೋಪಗಳನ್ನು ತಳ್ಳಿ ಹಾಕಿದ್ದರು. ಮಸೀದಿ ಗೋಡೆ ಕೆಡವಲಾಗಿದೆ ಎಂಬ ಆರೋಪ ಸುಳ್ಳು, ಒಂದು ಇಟ್ಟಿಗೆಯನ್ನೂ ತೆಗೆದಿಲ್ಲ. ಇಲ್ಲಿ ಯಾವುದೇ ಉತ್ಕನನ ನಡೆಯುತ್ತಿಲ್ಲ. ಒಂದೇ ಒಂದು ಇಟ್ಟಿಗೆಗೂ ಧಕ್ಕೆಯಾಗದಂತೆ ಪುತಾತತ್ವ ಇಲಾಖೆ ಸಮೀಕ್ಷೆ ನಡೆಸಲಿದೆ. ಸಮೀಕ್ಷೆಗೂ ಉತ್ಕನನಕ್ಕೂ ವ್ಯತ್ಯಾಸವಿದೆ. ಮಸೀದಿಯಲ್ಲಿ ಎಎಸ್‌ಐ ರಾಡಾರ್ ಇಮೇಜಿಂಗ್/ಫೋಟೋಗ್ರಫಿ ನಡೆಸುತ್ತಿದೆಯೇ ವಿನಾ ಯಾವುದೇ ಉತ್ಖನನ ನಡೆಸಿಲ್ಲ ಎಂದು ವಕೀಲರು ವಾದಿಸಿದ್ದರು. ಫೋಟೋಗ್ರಫಿ, ವಿಡಿಯೋಗ್ರಫಿ ಮಾಡಿದರೆ ಮಸೀದಿ ಮೂಲಸ್ವರೂಪಕ್ಕೆ ಧಕ್ಕೆ ಬರುವುದಿಲ್ಲ ಎಂದು ಹಿಂದೂ ಪರ ವಕೀಲರು ವಾದ ಮಂಡಿಸಿದ್ದರು.
ಆದರೆ ವಕೀಲ ನಖ್ವಿ ಅವರ ವಾದವನ್ನು ತಿರಸ್ಕರಿಸಿದ ಹೈಕೋರ್ಟ್ ವಾರಾಣಸಿ ಸೆಷನ್ಸ್ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ.