ಕಾರ್ಕಳ: ಹಿರಿಯ ಪತ್ರಕರ್ತ, ಲೇಖಕ ಡಾ ಶೇಖರ ಅಜೆಕಾರು ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಮುಂಜಾನೆ ಸ್ನಾನಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ರಕ್ತದೊತ್ತಡ ಏರುಪೇರಾಗಿ ಕುಸಿದುಬಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿಯಾಗಿ ಸಾಕಷ್ಟು ಸಾಹಿತ್ಯದ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಮಕ್ಕಳ ಸಾಹಿತ್ಯ ಸಮ್ಮೇಳನ, ಕವಿಗೋಷ್ಟಿ ಮೂಲಕ ಮಕ್ಕಳಲ್ಲಿ ಕನ್ನಡ ನಾಡುನುಡಿಯ ಅಸ್ಮಿತೆಯನ್ನು ಜಾಗೃತಗೊಳಿಸುವಲ್ಲಿ ಶ್ರಮಿಸಿದ್ದರು.
ಇದರ ಜತೆಗೆ ಆಯಾ ಊರಿನ ಸಮಗ್ರ ಮಾಹಿತಿಯುಳ್ಳ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಕ್ಷೇತ್ರ ಪರಿಚಯದ ಕಾರ್ಯವನ್ನು ಮಾಡಿ ಜನಮೆಚ್ಚುಗೆ ಗಳಿಸಿದ್ದರು.
ಕನ್ನಡ ದಿನಪತ್ರಿಕೆಗಳಾದ ಕನ್ನಡ ಪ್ರಭ, ಸಂಯಕ್ತ ಕರ್ನಾಟಕ, ಕರ್ನಾಟಕ ಮಲ್ಲ ಮುಂತಾದ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು,ಇದಲ್ಲದೇ ಡೈಜಿವರ್ಲ್ಡ್, ಗಲ್ಫ್ ಕನ್ನಡಿಗ ವೆಬ್ ಮಾಧ್ಯಮಗಳಿಗೂ ವರದಿಗಾರರಾಗಿದ್ದರು.
ಕನ್ನಡ ನಾಡು ನುಡಿಗಾಗಿ ವರ್ಷದ 365 ದಿನವೂ ಒಂದಲ್ಲಾ ಒಂದು ವಿನೂತನ ಕಾರ್ಯಕ್ರಮ ನಡೆಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಸಾಹಿತ್ಯ ಕೃಷಿ ಮಾಡಿಕೊಂಡು ಬಂದಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಜೆಕಾರು ಹೋಬಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮರ್ಣೆ ಗ್ರಾಮದ ಅಜೆಕಾರು ಕುರ್ಪಾಡಿಯ ಡಾ ಶೇಖರ ಅಜೆಕಾರು ಪತ್ನಿ,ಓರ್ವ ಪುತ್ರ,ಓರ್ವ ಪುತ್ರಿ,ತಂದೆ ತಾಯಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.