ಕಾರ್ಕಳ:ಪಡಿ ಸಂಸ್ಥೆ ಮಂಗಳೂರು, ಹಿರ್ಗಾನ ಗ್ರಾಮ ಪಂಚಾಯತ್ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಾಜ ಕಾರ್ಯ ವಿಭಾಗ ಆಳ್ವಾಸ್ ವಿದ್ಯಾ ಸಂಸ್ಥೆ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಸಪ್ತಾಹ ಕಾರ್ಯಕ್ರಮವು ಚಿಕ್ಕಲ್ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನೀತಾ ಮಕ್ಕಳ ಹಕ್ಕುಗಳ ಕರಪತ್ರವನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪಡಿ ಸಂಸ್ಥೆಯ ತರಬೇತಿ ಸಂಯೋಜಕ ವಿವೇಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಇವರು ಇಂದಿನ ಮಕ್ಕಳು ಇಂದಿನ ಪ್ರಜೆಗಳು, ಎಲ್ಲಾ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಶಿಕ್ಷಣ ಹಕ್ಕು ಕಾಯಿದೆ -2009ರ ಸಮರ್ಪಕ ಅನುಷ್ಠಾನಕ್ಕಾಗಿ ಮಗು ಸ್ನೇಹಿ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ಸಪ್ತಾಹ – 2023-24 ಅಭಿಯಾನ ಕಾರ್ಯಕ್ರಮ ಅಂಗವಾಗಿ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಒಂದು ವಾರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳ ರಕ್ಷಣೆಯ ವಿಚಾರದಲ್ಲಿ ಗ್ರಾಮ ಪಂಚಾಯತ್ ನಿಗಾವಹಿಸಬೇಕಾಗಿದೆ ಮತ್ತು ಈ ಒಂದು ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಲು ಗ್ರಾಮ ಪಂಚಾಯತ್, ಶಿಕ್ಷಣ ಇಲಾಖೆ ಮತ್ತು ಮಕ್ಕಳಿಗೆ ಸಂಬಂಧಪಟ್ಟ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಹಿರ್ಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಮೊದಲು ಮಕ್ಕಳು ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು, ಹಕ್ಕುಗಳ ಜೊತೆಗೆ ತಮ್ಮ ಕರ್ತವ್ಯಗಳ ಕಡೆಗೆ ಗಮನ ಹರಿಸಬೇಕು. ಮುಂದಿನ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಎಲ್ಲಾ ಮಕ್ಕಳು ಸ್ವಯಂ ಆಗಿ ತಮ್ಮ ತಮ್ಮ ಸಮಸ್ಯೆಗಳನ್ನು ಹೇಳುವಂತರಾಗಬೇಕು ಮತ್ತು ಮಕ್ಕಳ ಅತಿಯಾದ ಮೊಬೈಲ್ ಬಳಕೆಯಿಂದಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಮಕ್ಕಳ ಪೋಷಕರು ಗಂಭೀರವಾಗಿ ಗಮನಹರಿಸಬೇಕಾಗಿದೆ ಮತ್ತು
ಪಡಿ ಸಂಸ್ಥೆಯ ಈ ಮೂರು ವರ್ಷದ ಯೋಜನೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಪಡಿ ಸಂಸ್ಥೆಯ ಪಂಚಾಯಿತಿ ಸುಗಮಕಾರೆ ರೇಷ್ಮಾ ಒಂದು ವಾರದ ಅಭಿಯಾನದ ರೂಪುರೇಷೆಗಳ ಕುರಿತು ವಿಚಾರ ಮಂಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಶೋಭಾ ಭಾಸ್ಕರ್, ಮಕ್ಕಳಿಗೆ ಪೋಕ್ಸೋ – ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯದ ಕುರಿತು ಮತ್ತು ಮಕ್ಕಳ ಅತಿಯಾದ ಮೊಬೈಲ್ ಬಳಕೆಯ ಕುರಿತು ಮಾಹಿತಿ ನೀಡಿದರು.
ಎಸ್’ಡಿಎಂಸಿ ಅಧ್ಯಕ್ಷ ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವ ಪೂಜಾರಿ ವಹಿಸಿ ಮಾತನಾಡಿ, ಈ ಒಂದು ಕಾರ್ಯಕ್ರಮದ ಸದುಪಯೋಗವನ್ನು ಎಲ್ಲಾ ಮಕ್ಕಳು ಮತ್ತು ಪೋಷಕರು ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಪೊಷಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಅಧ್ಯಕ್ಷ ದಿವಾಕರ್ ಕುಮಾರ್, ಭವ್ಯ, ದಿನೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು
ತೇಜಸ್ವಿನಿ ಸ್ವಾಗತಿಸಿ, ಸಜಿತ್ ವಂದಿಸಿದರು.ಹೃದಯ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ