ಬೆಂಗಳೂರು: ಹುಲಿ ಉಗುರಿನ ಲಾಕೆಟ್ ಧರಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದ ಅವರನ್ನು ಅಕ್ಟೋಬರ್ 22ರ ರಾತ್ರಿ ಬಂಧಿಸಲಾಗಿತ್ತು. ಬಳಿಕ ಅರಣ್ಯಾಧಿಕಾರಿಗ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 2ನೇ ಎಸಿಜೆಎಂ ನ್ಯಾಯಾಧೀಶರು ವರ್ತೂರು ಸಂತೋಷ್ಗೆ ನವೆಂಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಜಾಮೀನು ಸಿಗುವ ತನಕ ಪರಪ್ಪನ ಅಗ್ರಹಾರದಲ್ಲಿ ಸಂತೋಷ್ ಕಾಲ ಕಳೆಯಬೇಕಿದೆ.
.ನ್ಯಾಯಾಂಗ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ವರ್ತೂರು ಸಂತೋಷ್ ಪರ ವಕೀಲ ನಟರಾಜ್ ಜಾಮೀನು ಅರ್ಜಿ ಹಾಕಿದ್ದೇವೆ, ಬುಧವಾರ ವಿಚಾರಣೆ ಇದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತನಿಖಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಂಧಿಸಿದ್ದಾರೆ. ಎಕ್ಸ್ಫರ್ಟ್ ಪರಿಶೀಲನೆ ನಡೆಸಿ ವರದಿ ಬಂದ ಬಳಿಕ ಗೊತ್ತಾಗಲಿದೆ ಎಂದರು.
ಹೊಸೂರು ರಸ್ತೆಯಲ್ಲಿ ಮೂರು ವರ್ಷದ ಹಿಂದೆ ಖರೀದಿ ಮಾಡಿದ್ದಾರೆ. ಬಿಲ್ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಸದ್ಯ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕೋರ್ಟ್ ರಜೆ ಇರುವ ಹಿನ್ನೆಲೆ ಬುಧವಾರ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗುತ್ತೆ ಎಂದು ವಕೀಲ ಕೆ. ನಟರಾಜ್ ಹೇಳಿಕೆ ನೀಡಿದ್ದಾರೆ




