ಕಾರ್ಕಳ: ಹೆದ್ದಾರಿಗಳ ಅಗಲೀಕರಣ ಸಂದರ್ಭದಲ್ಲಿ ಅರಣ್ಯ ಇಲಾಖೆ ಮರ ಕಡಿಯಲು ತೋರಿಸುವ ಉತ್ಸಾಹ,ಕಡಿದ ಮರದ ಬದಲಿಯಾಗಿ ಸಸಿ ನೆಡುವ ವಿಚಾರದಲ್ಲಿ ತೋರಬೇಕೆಂದು ಹೆದ್ದಾರಿ ಹೋರಾಟ ಸಮಿತಿಯ ಮುಖಂಡ ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.
ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ಈಗಾಗಲೇ 3 ಸಾವಿರಕ್ಕಿಂತಲೂ ಹೆಚ್ಚಿನ ಮರಗಳನ್ನು ಕಡಿದುರುಳಿಸಲಾಗಿದೆ.ಆದರೆ ಕಡಿದ ಮರಗಳ ಬದಲಿಗೆ ಸಸಿಗಳನ್ನು ನೆಡುವ ಹೊಣೆಗಾರಿಕೆಯನ್ನು ಅರಣ್ಯ ಇಲಾಖೆ ನಿರ್ಲಕ್ಷ್ಯಿಸಿದೆ. ಸರಕಾರದ ನಿಯಮಾನುಸಾರ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಒಂದು ಮರ ಕಡಿದರೆ ಒಂದು ಮರದ ಬದಲಿಗೆ 10 ಸಸಿಗಳನ್ನು ನೆಡಬೇಕು,ಆದರೆ ಸರ್ಕಾರದ ನಿಯಮಗಳು ಕೇವಲ ಪುಸ್ತಕದ ಬದನೆಕಾಯಿ ಎಂಬಂತಾಗಿದೆ ಎಂದಿದ್ದಾರೆ.
ನಮ್ಮ ಪೂರ್ವಜರು ನೆಟ್ಟು ಬೆಳೆಸಿ ಸಂರಕ್ಷಿಸಿದ ವಿವಿಧ ಪ್ರಭೇದಗಳ ಅಮೂಲ್ಯವಾದ ಗಿಡಮರ ಕಡಿಯುವುದು ಸುಲಭ. ಆದರೆ ಮತ್ತೆ ಸಸಿಗಳನ್ನು ನೆಟ್ಟು ಬೃಹದಾಕಾರದ ಮರಗಳನ್ನು ಬೆಳೆಸುವುದು ಅಷ್ಟೇ ಕಷ್ಟ.
ರಸ್ತೆ ಬದಿಯಲ್ಲಿ ವಿಸ್ತಾರವಾಗಿ ಬೆಳೆದು ದಾರಿ ಹೋಕರಿಗೆ ಹಾಗೂ ವಾಹನ ಚಾಲಕರಿಗೆ ನೆರಳು ಗಾಳಿಯ ಜೊತೆಗೆ ಅದೆಷ್ಟೋ ಪಕ್ಷಿ ಸಂಕುಲಗಳಿಗೆ ಆಶ್ರಯವನ್ನು ನೀಡುತ್ತಿದ್ದ ಬೃಹದಾಕಾರದ ಸಹಸ್ರಾರು ಮರಗಳು ಧರೆಗುರುಳಿವೆ.
ಕಳಸ, ಹೊರನಾಡು, ಶೃಂಗೇರಿ ಧರ್ಮಸ್ಥಳ,ಚಿಕ್ಕಮಗಳೂರು ಹೀಗೆ ವಿವಿಧ ಪ್ರವಾಸ ತಾಣಗಳಿಗೆ ಭೇಟಿ ನೀಡುವ ರಾಜ್ಯದ ನಾನಾ ಮೂಲೆಗಳ ಪ್ರವಾಸಿಗರು ಕಾರ್ಕಳ ಭಾಗವಾಗಿ ಪ್ರಯಾಣಿಸುವಾಗ ರಸ್ತೆಯ ಇಕ್ಕೆಲಗಳ ಸಾಲು ಮರಗಳ ತಂಪಿನ ನೆರಳು, ತಂಗಾಳಿ ಮೈಮನಗಳನ್ನು ಪುಳಕಿತಗೊಳಿಸುತ್ತಿದ್ದವು.
ಇದೀಗ ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಲಿಂಬಿ ಗುಡ್ಡದ ಬಳಿಕ ಮುರತಂಗಡಿ,ಸಾಣೂರು ಪುಲ್ಕೇರಿ ಬೈಪಾಸ್ ವರೆಗೆ ರಸ್ತೆ ಇಕ್ಕೆಲಗಳಲ್ಲಿ ನೆಲೆ ನಿಂತಿದ್ದ ಬೃಹತ್ ಮರಗಳನ್ನು ಕಡಿದ ಪರಿಣಾಮ ಮರುಭೂಮಿಯಂತಾಗಿದೆ.
ಚತುಷ್ಪಥ ರಸ್ತೆಗಳ ಜೊತೆಗೆ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣದಿಂದ ರಸ್ತೆಗಳು ಮೈದಾನದಂತೆ ವಿಶಾಲವಾಗಿವೆ. ಮರ-ಗಿಡಗಳು ಕಣ್ಮರೆಯಾಗಿ ಬಿಸಿಲಿನ ಝಳದ ಜೊತೆಗೆ ರಸ್ತೆ ಡಾಮಾರಿನ ಬಿಸಿಯೂ ಸೇರಿ ವಾಹನ ಚಾಲಕರಿಗೆ, ಪ್ರಯಾಣಿಕರಿಗೆ ಮತ್ತು ರಸ್ತೆಯ ಬದಿಯಲ್ಲಿ ನಡೆಯುವವರಿಗೆ ಬಿಸಿಗಾಳಿಯ ಅನುಭವವು ಆಗುತ್ತಿದೆ.ಮರಗಳನ್ನು ಕಡಿದ ಪರಿಸರದಲ್ಲಿಯೇ ಹೊಸ ಸಸಿಗಳನ್ನು ನೆಟ್ಟು ಬೆಳೆಸಿದರೆ ಮಾತ್ರ, ಹೆದ್ದಾರಿ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಜನ _ಜಾನುವಾರು, ಪಕ್ಷಿ ಪ್ರಾಣಿ ಸಂಕುಲಗಳ ಜೊತೆಗೆ ಪ್ರಯಾಣಿಕರು ಹಾಗು ವಾಹನ ಚಾಲಕರಿಗೆ ಒಂದೆರಡು ವರ್ಷಗಳಲ್ಲಿ ಸ್ವಲ್ಪ ಮರ-ಗಿಡಗಳ ನೆರಳು ಮತ್ತು ತಂಗಾಳಿಯ ಅನುಭವ ಆಗಬಹುದು.
ವಲಯ ಅರಣ್ಯ ಅಧಿಕಾರಿಯವರು ಹೆದ್ದಾರಿ ಅಭಿವೃದ್ಧಿಯಾಗುತ್ತಿರುವ ಜಾಗದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಸಸಿಗಳನ್ನು ನೆಡಲಾಗುತ್ತದೆ ಎನ್ನುವ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದು ಅತಿ ಅಗತ್ಯವಾಗಿದೆ. ರಸ್ತೆ ಹಾದು ಹೋಗುವ ಸ್ಥಳೀಯ ಗ್ರಾಮ ಪಂಚಾಯತ್ ಮುತುವರ್ಜಿ ವಹಿಸಿ ಶಾಸಕರು ಸಂಸದರು ಮತ್ತು ಅರಣ್ಯ ಇಲಾಖೆಯವರ ಮೇಲೆ ಒತ್ತಡ ತಂದರೆ ಮಾತ್ರ ನಿಯಮಾನುಸಾರ ನೀಡಬೇಕಾದ ಹೊಸ ಸಸಿಗಳು ಸಮರ್ಪಕವಾಗಿ ನೆಡಲ್ಪಟ್ಟು ಪರಿಸರದ ಮೇಲೆ ಈಗಾಗಲೇ ಆಗಿರುವ ಆಘಾತಕ್ಕೆ ಒಂದಷ್ಟು ಉಪಶಮನ ಮಾಡಬಹುದು.ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಯವರು ಕೂಡಲೇ ಸಾರ್ವಜನಿಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕೆಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾಣೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ಒತ್ತಾಯಿಸಿದ್ದಾರೆ