Share this news

ಹೆಬ್ರಿ : ಮಹಿಳೆಯರು ಈಗ ಸಬಲರಾಗಿದ್ದಾರೆ. ಪುರುಷರಷ್ಟೇ ಸಮಾನರಾಗಿದ್ದಾರೆ. ಆದರೂ ಹಲವೆಡೆ ಪುರುಷರಿಂದ ಈಗಲೂ ದೌರ್ಜನ್ಯ ನಡೆಯುತ್ತಿದ್ದು, ಆ ದೌರ್ಜನ್ಯ ಕೊನೆಯಾಗಬೇಕಿದೆ ಎಂದು ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸ್ನೇಹಲತಾ ಟಿ.ಜಿ. ಹೇಳಿದರು.

ಅವರು ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಭವನದಲ್ಲಿ ಭಾನುವಾರ ಸಾವಿತ್ರಿ ಸತ್ಯವಾನ್ ಟ್ರಸ್ಟ್ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಸಾಧಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾವಿತ್ರಿ ಸತ್ಯವಾನ್ ಟ್ರಸ್ಟ್ ರಿ. ಸಂಸ್ಥಾಪಕಿ ಡಾ.ಮಮತಾ ಜಿ. ಹೆಗ್ಡೆ, ಉಡುಪಿ ಜಿಲ್ಲೆಯಲ್ಲಿ ಕೃಷಿಗೆ ಪೂರಕವಾದ ವಾತಾವರಣ ಇಲ್ಲ, ಆಧುನಿಕ ಕೃಷಿಗೆ ಬೇಕಾದ ಮೂಲ ಸೌಕರ್ಯಗಳು, ಭತ್ತಕ್ಕೆ ಡ್ರೈ ಛೇಂಬರ್ ಸಹಿತ ಯಾವುದೇ ವ್ಯವಸ್ಥೆಗಳಿಲ್ಲ. ನಮ್ಮ ರೈತರು ಸಮಗ್ರವಾಗಿ ಕೃಷಿಯನ್ನು ಮಾಡಬೇಕಾದರೆ ಉಡುಪಿ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕು. ನೆಲ ಜಲ ಸಂಸ್ಕೃತಿ ಮತ್ತು ಸ್ವಾತಂತ್ರö್ಯಕ್ಕಾಗಿ ಹೋರಾಡಿದ ವೀರ ಮಹಿಳೆಯರ ಆದರ್ಶವನ್ನು ಪಾಲಿಸಿಕೊಂಡು ಮುನ್ನಡೆದು ಸಬಲೆಯರಾಗಬೇಕು ಎಂದರು.

ಹೆಬ್ರಿ ಕಾರ್ಕಳ ತಾಲೂಕಿನ ಸಾಧಕಿಯರಾದ ಶಿಕ್ಷಕಿ ಪೂರ್ಣಿಮಾ ಶೆಣೈ, ಕವಿ ಚೈತ್ರಾ ಕಬ್ಬಿನಾಲೆ, ನಾಟಿ ವೈದ್ಯೆ ಜಯಂತಿ ಮಾಳ, ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಕೃಷಿ ಕ್ಷೇತ್ರದ ಸಾಧಕಿ ಸುಮಲತಾ ನಾಗರಾಜ ಮಾಳ, ಸಂಗೀತ ಕ್ಷೇತದ ಸಾಧಕಿ ಆರತಿ, ಸಮಾಜ ಸೇವಕಿ ಗಾಯತ್ರಿ ಪ್ರಭು, ಸುರಕ್ಷಾ ಸೇವಾಶ್ರಮದ ಆಯೇಷಾ ಭಾನು,ಶಿಕ್ಷಕಿ ಗೀತಾ ಎಸ್ ಹೆಗ್ಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೋದಿ ಬ್ರಿಗೇಡ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೇದಾವತಿ ಹೆಗ್ಡೆ, ಕುಚ್ಚೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಶೆಟ್ಟಿ, ಹೆಬ್ರಿಯ ವೈದ್ಯರಾದ ಡಾ. ರೇಷ್ಮಾ ಶೆಟ್ಟಿ, ಅಮೃತ ಭಾರತಿ ಶಾಲೆಯ ಮಾತೃಮಂಡಳಿ ಅಧ್ಯಕ್ಷೆ ವೀಣಾ ಭಟ್, ಚೈತನ್ಯ ಮಹಿಳಾ ವೃಂದದ ಅಧ್ಯಕ್ಷೆ ವಿದ್ಯಾ ಜನಾರ್ಧನ್ ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

ಸುಷ್ಮಾ ಪೂಜಾರಿ ಸ್ವಾಗತಿಸಿ, ನಿರೂಪಿಸಿದರು.

 

Leave a Reply

Your email address will not be published. Required fields are marked *