ಹೆಬ್ರಿ: ಜನತೆಯ ಆಶಯದಂತೆ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಮೂಲಸೌಕರ್ಯ,ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಅಭಿವೃದ್ದಿಪಡಿಸಿ ಮಾದರಿ ಕ್ಷೇತ್ರವನ್ನಾಗಿಸುವುದೇ ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಸೋಮವಾರ ಹಬ್ರಿ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳ ಮೂಲಸೌಕರ್ಯವನ್ನು ಒದಗಿಸಲು ಸರಕಾರ ಬದ್ಧವಾಗಿದೆ. ಎಂದು ಇಂಧನ ಹಾಗು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಇಂದಿನ ಸಮಾಜದಲ್ಲಿ ಜನರು ವಿದ್ಯಾವಂತರಾಗುತ್ತಿದ್ದಾರೆ.ಜತೆಗೆ ಅಪರಾಧಗಳೂ ಹೆಚ್ಚುತ್ತಿವೆ.ನೂರಾರು ಸಮಸ್ಯೆಗಳ ನಡುವೆ ಜನರ ಯೊಚನಾ ಲಹರಿಗಳು ಬದಲಾಗುತ್ತಿರುವ ಈಗಿನ ಕಾಲಘಟಕ್ಕೆ ನಾವು ಒಗ್ಗಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ತಂತ್ರಜ್ಞಾನ ಆಧಾರಿತ ಸೇವೆಗಳು ಪೋಲಿಸ್ ಇಲಾಖೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಪರಾಧಗಳನ್ನು ಬೇಧಿಸುವಲ್ಲಿ ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದರು.
ಧಾರವಾಡದಲ್ಲಿ ಹೊಸ ತಂತ್ರಜ್ಞಾನ ಅಧಾರಿತ ಪೋಲಿಸ್ ತರಬೇತಿ ಘಟಕ ಸ್ಥಾಪನೆಗೊಂಡಿದ್ದು ಅಲ್ಲಿ ತರಬೇತಿ ಪಡೆದ ಪೋಲೀಸರು ಸ್ಥಳೀಯ ಠಾಣೆಗಳಲ್ಲಿ ನಿಯೋಜನೆಗೊಳ್ಳುವ ಮೂಲಕ ಸೈಬರ್ ಅಪರಾಧಗಳನ್ನು ಭೇದಿಸಲು ಸಹಕಾರಿಯಾಗುತ್ತಿದೆ.ಸೈಬರ್ ಕ್ರೆöÊಂಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಸೆನ್ ಪೋಲಿಸ್ ಘಟಕವನ್ನು ನಾಲ್ಕು ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗಿದೆ ಎಂದರು. ನೂತನ ಕಟ್ಟಡದ ಸವಿನೆನಪಿಗಾಗಿ ಸಚಿವ ಸುನಿಲ್ ಕುಮಾರ್ ತೆಂಗಿನಸಸಿ ನೆಟ್ಟರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ. ಹಾಕೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ, ಹೊಸ ಕಟ್ಟಡ ಬಂದ ಬಳಿಕ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆ ಜೊತೆ ಜನಸಾಮಾನ್ಯರ ಸಹಕಾರವೂ ಬಹುಮುಖ್ಯ ಎಂದರು.
ಮುಖ್ಯ ಅತಿಥಿಗಳಾಗಿ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ,ಹೆಬ್ರಿ ಗ್ರಾ. ಪಂ. ಅಧ್ಯಕ್ಷೆ ಮಾಲತಿ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಮುಖ್ಯ ಅಭಿಯಂತರ ಸಂಜೀವ ವಿ. ರೆಡ್ಡಿ, , ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜೆ ಶಶಿಧರ್, ಕಾರ್ಕಳ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಉಪಸ್ಥಿತರಿದ್ದರು.
ಕಟ್ಟಡ ಗುತ್ತಿಗೆದಾರ ಚರಣ್ ಹೆಗ್ಡೆ, ಪೋಲೀಸ್ ಅಭಿವೃದ್ಧಿ ನಿಗಮದ ಮುಖ್ಯ ಅಭಿಯಂತರ ಸನ್ನೆಗೌಡ ಹಾಗೂ ಸಂಜಯ್ ಅವರನ್ನು ಸನ್ಮಾನಿಸಲಾಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ. ಸಿದ್ಧಲಿಂಗಪ್ಪ ವಂದಿಸಿದರು.