ಹೆಬ್ರಿ: ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಗುರುವಾರ ನಡೆಯಿತು.
ಹೆಬ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಟಿ.ಎಂ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಗೌರವವಂದನೆಯನ್ನು ಸ್ವೀಕರಿಸಿದ ಬಳಿಕ ಮಾತನಾಡಿ, ಜೀವನದಲ್ಲಿ ಅತ್ಯಂತ ಶಿಸ್ತು ಬೆಳೆಸಿಕೊಳ್ಳಲು ಕ್ರೀಡಾಕೂಟ ಸಹಾಯಕವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸದಾಕಾಲ ಚೈತನ್ಯ ತುಂಬುವ ಪ್ರಯತ್ನ ನಮ್ಮದಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಪಾಲ್ಗೊಂಡು ಸಫಲರಾಗಬೇಕು. ದೇಶದ ಗೌರವವನ್ನು ಎತ್ತಿ ಹಿಡಿಯುವ ಮೂಲಕ ಸಮಾಜದ ಮಾದರಿ ವ್ಯಕ್ತಿಗಳಾಗಿ ಎಂದು ಆಶಿಸಿದರು.
ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಗಂಗೊಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ದೇಶದ ಹೆಮ್ಮೆಯಾಗಬೇಕು. ಭಾರತ ಸರ್ಕಾರದ ಕ್ರೀಡಾ ಇಲಾಖೆ ಬಹಳ ಪ್ರೋತ್ಸಾಹವನ್ನು ಇತ್ತೀಚೆಗೆ ಕ್ರೀಡೆಗೆ ನೀಡುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಮೃತಭಾರತಿ ಟ್ರಸ್ಟ್ ನ ಅಧ್ಯಕ್ಷ ಸಿಎ ಎಂ ರವಿರಾವ್ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗುರುದಾಸ್ ಶೆಣೈ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಟ್ರಸ್ಟ್ ನ ಸದಸ್ಯರಾದ ಯೋಗೀಶ್ ಭಟ್, ಬಾಲಕೃಷ್ಣ ಮಲ್ಯ, ಸಂಸ್ಥೆಯ ಮುಖ್ಯಸ್ಥರಾದ ಅಮರೇಶ್ ಹೆಗ್ಡೆ, ಅಪರ್ಣಾ ಆಚಾರ್, ಶಕುಂತಲಾ, ಅರುಣ್ ಕುಮಾರ್, ಅನಿತಾ ಉಪಸ್ಥಿತರಿದ್ದರು. ಅಮೃತ ಭಾರತಿ ಪದವಿ ಪೂರ್ವ ಕಾಲೇಜು, , ಅಮೃತ ಭಾರತಿ ವಿದ್ಯಾಲಯ ಹಾಗೂ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಹೆಗ್ಡೆ ಸ್ವಾಗತಿಸಿ, ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ವಿಜಯ ಕುಮಾರ್ ಶೆಟ್ಟಿ ನಿರೂಪಿಸಿದರು.