ಕಾರ್ಕಳ: ಬಡರೋಗಿಗಳಿಗೆ ಅನುಕೂಲವಾಗಲೆಂದು ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕರ್ತವ್ಯಲೋಪದ ಆರೋಪ ಕೇಳಿಬಂದಿದೆ.
ತುಂಬು ಗರ್ಭಿಣಿಯೊಬ್ಬರು ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಬಂದರೂ ಸಕಾಲದಲ್ಲಿ ವೈದ್ಯರ ನೆರವು ಸಿಗದೇ ಮಂಗಳೂರು ಲೇಡಿಗೋಷನ್ವ್ ಆಸ್ಪತ್ರೆಗೆ ಹೆರಿಗೆಗೆ ದಾಖಲಾದರೂ ಮಗು ಹೊಟ್ಟೆಯಲ್ಲಿ ಮೃತಪಟ್ಟಿದ್ದು ಇದಕ್ಕೆ ಕಾರ್ಕಳ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಕಾರಣವೆಂದು ಮಹಿಳೆಯ ಸಂಬಂಧಿಕರು ದೂರಿದ್ದಾರೆ.
ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮಠದ ಮಠದಕೆರೆ ನಿವಾಸಿ ಆಶಾ ಪೂಜಾರಿ ಎಂಬವರ ಮಗಳು ಸುಬಿತಾ ಎಂಬವರು ಮಾರ್ಚ್ 17ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು.ಆದರೆ ಮಗು ಹೆಚ್ಚು ತೂಕ ಹೊಂದಿದೆ ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ ಆದ್ದರಿಂದ ಗರ್ಭಿಣಿ ಸುಬಿತಾ ಅವರನ್ನು ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು,ಆದರೆ ಮಗು ಹೆರಿಗೆ ಮುನ್ನವೇ ಮೃತಪಟ್ಟಿತ್ತು ಎಂದು ಅಶಾ ಪೂಜಾರಿ ಆರೋಪಿಸಿದ್ದಾರೆ.
ಸುಬಿತಾ 7 ತಿಂಗಳ ಗರ್ಭಿಣಿಯಾದ ಬಳಿಕ ಸೀಮಂತದ ನಂತರ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲೇ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು.ಅಲ್ಲದೇ ಮಾರ್ಚ್ 20 ರಂದು ಹೆರಿಗೆಗೆ ದಿನಾಂಕ ನೀಡಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಗರ್ಭಿಣಿ ಸುಬಿತಾ ಹಾಗೂ ಮಗುವಿನ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ವರದಿ ನೀಡಿದ್ದರೂ ಮಗು ಹೇಗೆ ಮೃತಪಟ್ಟಿದೆ ಎಂದು ಆಶಾ ಪೂಜಾರಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ನಮ್ಮಂತಹ ಬಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ ಎಂದು ಬಂದರೆ ವೈದ್ಯರು ಜೀವ ತೆಗೆಯುತ್ತಾರೆ, ನನ್ನ ಮಗಳ ಮಗು ಮೃತಪಟ್ಟಿದೆ ಆದರೆ ಇನ್ನು ಯಾರಿಗೂ ಈ ನೋವು ಬಾರದೇ ಇರಲಿ ಎಂದು ಗದ್ಗದಿತರಾಗಿ ಕಣ್ಣೀರು ಹಾಕಿದರು.
ಮಗು ಮೃತಪಟ್ಟ ಪ್ರಕರಣದ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೆ.ಸುಬ್ರಹ್ಮಣ್ಯ ರಾವ್ ಅವರನ್ನು ಸಂಪರ್ಕಿಸಿದಾಗ ಈ ಘಟನೆಯ ಕುರಿತು ತನಗೆ ಮಾಹಿತಿಯೇ ಇಲ್ಲವೆಂದು ತೀರಾ ನಿರ್ಲಕ್ಷ್ಯತನದ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣದ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಪ್ರತಿಕ್ರಿಯಿಸಿ,ಈ ಪ್ರಕರಣ ಅತ್ಯಂತ ನೋವಿನ ಸಂಗತಿ, ಇದರ ವಿಚಾರದಲ್ಲಿ ಸಮಗ್ರ ಮಾಹಿತಿ ಪಡೆದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು. ವೈದ್ಯರ ನಿರ್ಲಕ್ಷ್ಯದ ಆರೋಪವಿದ್ದರೆ ಮಹಿಳೆಯ ಪೋಷಕರು ಡಿಎಚ್ಓ ದೂರು ನೀಡಲು ಅವಕಾಶವಿದೆ ಎಂದಿದ್ದಾರೆ.
ಗರ್ಭಿಣಿ ಸುಬಿತಾ ತನ್ನ ಮಗುವಿನ ನೀರಿಕ್ಷೆಯಲ್ಲಿದ್ದು ಕೊನೆಗೂ ತನ್ನ ಮಗುವನ್ನು ಜೀವಂತವಾಗಿ ನೋಡಲು ಸಾಧ್ಯವಾಗಲಿಲ್ಲ ಎನ್ನುವುದೇ ನೋವಿನ ಸಂಗತಿ.
ಈ ಪ್ರಕರಣವನ್ನು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ನೊಂದ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.