ನವದೆಹಲಿ: ಅಡಕೆ ಆಮದು ಮೇಲಿನ ಕನಿಷ್ಠ ದರವನ್ನು ಕೇಂದ್ರ ಸರ್ಕಾರ ಕೆ.ಜಿ.ಗೆ 100 ರೂಪಾಯಿಯಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.ಈ ಹಿಂದೆ ಕೆ.ಜಿ.ಗೆ 251 ರೂಪಾಯಿ ಕನಿಷ್ಠ ಆಮದು ದರ ಇತ್ತು. ಈಗ ಅದನ್ನು ಕೇಂದ್ರ ಸರ್ಕಾರ ಅದನ್ನು 351 ರೂಪಾಯಿಗಳಿಗೆ ಹೆಚ್ಚಿಸಿದೆ.
ಕೇಂದ್ರ ಸರ್ಕಾರದ ಈ ನಡೆಯನ್ನು ಕ್ಯಾಂಪ್ಕೋ ಸ್ವಾಗತಿಸಿದೆ. ವಿದೇಶದಿಂದ ಭಾರತಕ್ಕೆ ಅಡಕೆ ಆಮದು ಕನಿಷ್ಠ ದರವನ್ನು ಉತ್ಪಾದನಾ ವೆಚ್ಚ ಪರಿಗಣಿಸಿ ಹೆಚ್ಚಳಗೊಳಿಸುವಂತೆ ಕ್ಯಾಂಪ್ಕೋ ಹಾಗೂ ಇನ್ನಿತರ ಸಹಕಾರಿ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದವು.
ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಹಾಗೂ ಕೃಷಿ ಯಂತ್ರ ಮೇಳ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜೊತೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಪ್ರತ್ಯೇಕವಾಗಿ ಮಾತನಾಡಿ ಮನವಿ ಮಾಡಿದ್ದರು.
ಆಮದು ದರ ಹೆಚ್ಚಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕಾಯುವ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಅವರು ಸಹ ಅಡಕೆ ಬೆಳೆಗಾರರ ಹಿತ ಕಾಯಲು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರು.