Share this news

ಛತ್ತೀಸ್​ಗಢ : ಇತ್ತೀಚಿನ ದಿನಗಳಲ್ಲಿ ಹೋಂ ಥಿಯೇಟರ್ ಬಳಕೆಯೂ ಹೆಚ್ಚಳಗೊಂಡಿದೆ. ಅದರ ಬಳಕೆ ಜನರು ಒಗ್ಗಿಕೊಂಡಿದ್ದಾರೆ ಅತಿಯಾದ ಬಳಕೆಯೂ ಅಘಾತಕಾರಿ ಅನ್ನೋದಕ್ಕೆ ನಿದರ್ಶನವಾಗಿ ಘಟನೆಯೊಂದು ಬೆಳಕಿಗೆ ಬಂದಿದೆ. 

ಛತ್ತೀಸ್‌ಗಢ-ಮಧ್ಯಪ್ರದೇಶ ಗಡಿಯಲ್ಲಿರುವ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಹೋಂ ಥಿಯೇಟರ್ ಮ್ಯೂಸಿಕ್ ಸಿಸ್ಟಂ ಸ್ಫೋಟಗೊಂಡು ನವವಿವಾಹಿತ, ಅವರ ಸಹೋದರ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ವ್ಯವಸ್ಥೆಯನ್ನು ಇರಿಸಲಾಗಿದ್ದ ಕೋಣೆಯ ಗೋಡೆಗಳು ಮತ್ತು ಮೇಲ್ಛಾವಣಿ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

22 ವರ್ಷದ ಹೇಮೇಂದ್ರ ಮೆರಾವಿ ಏಪ್ರಿಲ್ 1 ರಂದು ವಿವಾಹವಾಗಿದ್ದರು. ನವ ವಧು-ವರರು ಬೇರೊಂದು ಕೋಣೆಯಲ್ಲಿ ಮದುವೆಯ ಉಡುಗೊರೆಗಳನ್ನು ತೆರೆದು ನೋಡುತ್ತಿದ್ದರು. ತಂತಿಯನ್ನು ಎಲೆಕ್ಟ್ರಿಕ್ ಬೋರ್ಡ್‌ಗೆ ಜೋಡಿಸಿದ ನಂತರ ಮೆರಾವಿ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಆನ್ ಮಾಡಿದಾಗ, ಭಾರಿ ಸ್ಫೋಟ ಸಂಭವಿಸಿದೆ. ಮೇರಾವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಸಹೋದರ ರಾಜ್‌ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಕೌರಾದದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು. ಚಿಕಿತ್ಸೆ ವೇಳೆ ಮೆರಾವಿ ಅವರ ಸಹೋದರ ಸಾವನ್ನಪ್ಪಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ವಿಧಿವಿಜ್ಞಾನ ತಜ್ಞರೊಂದಿಗೆ ಪೊಲೀಸ್ ತಂಡ ಸ್ಥಳಕ್ಕೆ ತೆರಳಿದೆ. ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು. ಕೊಠಡಿಯನ್ನು ಪರಿಶೀಲಿಸಿದಾಗ ಸ್ಫೋಟಕ್ಕೆ ಕಾರಣವಾಗುವ ಯಾವುದೇ ದಹನಕಾರಿ ವಸ್ತು ಪತ್ತೆಯಾಗಿಲ್ಲ ಎಂದು ರೆಂಗಾಖರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದುರ್ಗೇಶ್ ರಾವ್ಟೆ ತಿಳಿಸಿದ್ದಾರೆ.

ಮ್ಯೂಸಿಕ್ ಸಿಸ್ಟಂ ಮಾತ್ರ ಕೋಣೆಯಲ್ಲಿ ಸ್ಫೋಟಗೊಂಡಿದ್ದು, ಸ್ಫೋಟಕ್ಕೆ ಕಾರಣ ತನಿಖೆಯ ನಂತರ ತಿಳಿಯಲಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *