

ನವದೆಹಲಿ: ಕೆಮ್ಮಿನ ಸಿರಪ್ ನಿಂದ 11 ಮಕ್ಕಳು ಸಾವನ್ನಪ್ಪಿದ ನಂತರ ಎಚ್ಚೆತ್ತುಕೊಂಡ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯ ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಿರಪ್ ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ನಂತರ ಒಂಬತ್ತು ಮಕ್ಕಳ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಸಿಕಾರ್‌ನಲ್ಲಿ ಇದೇ ರೀತಿಯ ಸಾವುಗಳು ವರದಿಯಾಗಿದ್ದು, ಮಧ್ಯಪ್ರದೇಶ ಮತ್ತು ನೆರೆಯ ರಾಜಸ್ಥಾನದ ಆರೋಗ್ಯ ಅಧಿಕಾರಿಗಳು, ಇದಕ್ಕೆ ಕಲುಷಿತ ಕೆಮ್ಮಿನ ಸಿರಪ್‌ಗಳ ಸೇವನೆ ಕಾರಣ ಎಂದು ಶಂಕಿಸಿದ್ದಾರೆ.
ಆದ್ದರಿಂದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಕ್ಕಳಿಗೆ ತೀರಾ ಅಗತ್ಯವಿದ್ದರೆ ಮಾತ್ರ ಕೆಮ್ಮಿನ ಸಿರಪ್ ನೀಡಲು ಸೂಚಿಸಿದೆ.
ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಿರಪ್ ನೀಡುವ ಅಗತ್ಯ ಇರುವುದಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಒದಗಿಸಬೇಕು ಎಂದು DGHS ಸೂಚಿಸಿದೆ.
ಈ ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಡಿಜಿಎಚ್ಎಸ್, ಮಕ್ಕಳಲ್ಲಿನ ಕೆಮ್ಮಿಗೆ ಸಿರಪ್ ಅನ್ನು ವಿವೇಚನೆ ಬಳಸಿ ವೈದ್ಯರು ಶಿಫಾರಸು ಮಾಡಬೇಕು. ಬಹುತೇಕ ಕೆಮ್ಮಿನ ಸಮಸ್ಯೆಗಳು ಔಷಧಗಳ ಅಗತ್ಯವಿಲ್ಲದೆ ಕಡಿಮೆಯಾಗುತ್ತದೆ ಎಂದು ಹೇಳಿದೆ.


