ಬೆಂಗಳೂರು: ಕಳೆದ 15 ವರ್ಷಗಳಿಂದ ಬಗರ್ ಹುಕುಂ ಜಾಗದಲ್ಲಿ ಸಾಗುವಳಿ ಮಾಡಿಕೊಂಡ ರೈತರಿಗೆ ಜಮೀನು ಮಂಜೂರು ಮಾಡಲು ಸರ್ಕಾರ ತೀರ್ಮಾನಿಸಿದೆ.
ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತರು 15 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೆ ಮಾತ್ರ ಉಳುಮೆ ಭೂಮಿ ಸಕ್ರಮ ಮಾಡಲು ಸರ್ಕಾರ ನಿರ್ಧರಿಸಿದೆ.
ಬಗರ್ ಹುಕುಂನಲ್ಲಿ ಅನೇಕರು ಬೊಗಸ್ ಅರ್ಜಿ ಸಲ್ಲಿಸಿದ್ದು, ಆಪ್ ಮೂಲಕ ನೈಜ ಉಳುಮೆದಾರರನ್ನು ಗುರುತಿಸಿ ಅರ್ಹ ರೈತರ ನೆರವಿಗೆ ಮುಂದಾಗಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ.
ಕೆಲವರು ಐದಾರು ಕಡೆ ಭೂಮಿ ಗುರುತಿಸಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಬೇರೆ ಬೇರೆ ತಾಲೂಕುಗಳಲ್ಲಿಯೂ ಬಗರ್ ಹುಕುಂಗೆ ಅರ್ಜಿ ಸಲ್ಲಿಸಿದ್ದಾರೆ.
ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಲಕ್ಷಾಂತರ ರೈತರು ಬಗರ್ ಹುಕುಂ ಜಮೀನು ಸಕ್ರಮಕ್ಕೆ ಕಾಯುತ್ತಿದ್ದು, ಸರ್ಕಾರಿ ಭೂಮಿ ಕೂಡ ಭಾರೀ ಪ್ರಮಾಣದಲ್ಲಿ ಒತ್ತುವರಿಯಾಗುತ್ತಿದೆ. ಇರುವ ಭೂಮಿಯನ್ನು ಉಳಿಸಿಕೊಂಡು ಅರ್ಹ ಬಡ ರೈತರಿಗೆ ಹಕ್ಕು ನೀಡಲು ಬಗರ್ ಹುಕುಂ ಸಕ್ರಮಕ್ಕೆ ಕೆಲವು ಕಠಿಣ ನಿಯಮಗಳನ್ನು ತರಲಾಗುತ್ತಿದೆ.
ಫಾರಂ 57 ರಲ್ಲಿ ಅರ್ಜಿ ಹಾಕಿರುವುದು ದುರುಪಯೋಗವಾಗಿರುವ ಸಾಧ್ಯತೆ ಇದೆ. 15 ವರ್ಷಗಳಿಂದ ಉಳುಮೆ ಮಾಡುತ್ತಿರುವ ಬಗ್ಗೆ ಆಪ್ ಮೂಲಕ ಪತ್ತೆ ಮಾಡಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುವುದು. ಉಳಿದ ಸರ್ಕಾರಿ ಭೂಮಿ ಒತ್ತುವರಿಯಾಗದಂತೆ ಬೀಟ್ ವ್ಯವಸ್ಥೆ ಜಾರಿಗೊಳಿಸಲಿದ್ದು, ಕಂದಾಯ ಇಲಾಖೆ ಸಿಬ್ಬಂದಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಭೂಮಿ ಇರುವ ಕಡೆ ಪರಿಶೀಲನೆ ನಡೆಸಬೇಕು. ಜಿಯೋ ಫೆನ್ಸಿಂಗ್ ಮಾಡಬೇಕು. ಭೂಮಿಯ ವಿವರಗಳನ್ನು ಅಪ್ಲೋಡ್ ಮಾಡಬೇಕು.
ಬಗರ್ ಹುಕುಂ ಸಮಿತಿಯ ಮುಂದೆ ಇರುವ ಅರ್ಜಿಗಳನ್ನು ಆರು ತಿಂಗಳ ಅವಧಿಯಲ್ಲಿ ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಬಗರ್ ಹುಕುಂ ಸಮಿತಿಗಳ ರಚನೆಗೆ ಪ್ರಕ್ರಿಯೆ ಆರಂಭಿಸಲಾಗಿದ್ದು, ಈಗಾಗಲೇ 50 ತಾಲೂಕುಗಳಲ್ಲಿ ಸಮಿತಿ ರಚನೆ ಪ್ರಕ್ರಿಯೆ ಅಂತಿಮಗೊಂಡಿದೆ.