ಬೆಂಗಳೂರು: 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಾಳೆ (ಮಾ.01) ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.
ಈ ಬಗ್ಗೆ ಇಂದು(ಫೆ.28) ಸುದ್ದಿಗೊಷ್ಠಿಯಲ್ಲಿ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಬಜೆಟ್ನಲ್ಲಿ 7ನೇ ವೇತನ ಆಯೋಗ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾಳೆಯಿಂದ ಸಾಮೂಹಿಕವಾಗಿ ಸರ್ಕಾರಿ ನೌಕರರು ಮುಷ್ಕರಕ್ಕೆ ಇಳಿಯಲಿದ್ದೇವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳು ಏಕಕಾಲದಲ್ಲಿ ಬಂದ್ ಆಗುತ್ತವೆ. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಸ್ವಾಗತಿಸುತ್ತೇವೆ. ಯಾವುದೇ ಸಂಧಾನಕ್ಕೆ ನಾವು ಬಗ್ಗುವುದಿಲ್ಲ. 7ನೇ ವೇತನ ಆಯೋಗ ವರದಿ ಜಾರಿಯಾದ್ರೆ ಮಾತ್ರ ಮುಷ್ಕರ ಹಿಂದಕ್ಕೆ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಳೆದ 1 ವರ್ಷದ ಸಿಎಂ ವೇತನ ಪರಿಷ್ಕರಣೆ ಭರವಸೆ ನೀಡಿದ್ದರು. ಆದರೆ ಈ ತನಕ ಭರವಸೆ ಈಡೇರಿಲ್ಲ. ವೇತನ ಆಯೋಗ ಪರಿಶೀಲನೆ ಭರವಸೆ ನೀಡಿದೆ. ಆದರೆ ಎಲ್ಲವೂ ಚರ್ಚೆ ಹಂತದಲ್ಲಿ ಇದೆ. ನಾವು ಸರ್ಕಾರಕ್ಕೆ ಪ್ರತಿಭಟನೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ಆದರೂ ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ನಾಳೆಯಿಂದ ರಾಜ್ಯದ ಎಲ್ಲ ಸರ್ಕಾರಿ ನೌಕರರು ಒಗಟ್ಟಾಗಿ ಅನಿರ್ಧಿಷ್ಟ ಅವಧಿ ಹೋರಾಟ ಮಾಡಬೇಕು. ಎಲ್ಲ ವೃಂದ ಸಂಘಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಉಪಾಧ್ಯಕ್ಷ ರುದ್ರಪ್ಪ, ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ದೊರೆ, ರಾಜ್ಯ ಸರ್ಕಾರಿ ಶಾಲಾ ಕಾಲೇಜುಗಳು ಸಂಘದ ಅಧ್ಯಕ್ಷ ಶಂಭುಲಿಂಗ ಗೌಡ ಉಪಸ್ಥಿತರಿದ್ದರು