ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ವಂಚನೆ ಮಾಡಿದ್ದ ಆರೋಪದಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಸಹೋದರ ಗೋಪಾಲ್ ಜೋಷಿಯವರನ್ನು ಶನಿವಾರ ಕೊಲ್ಲಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಂಚನೆ ಪ್ರಕರಣದ ಕುರಿತಂತೆ ಮೂವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶುಕ್ರವಾರ ಸೋಮಶೇಖರ್ ನಾಯಕ್ ಹಾಗೂ ವಿಜಯಕುಮಾರಿ ಎಂಬುವವರನ್ನು ಬಂಧಿಸಲಾಗಿದೆ.
ಇತ್ತ ವಂಚನೆ ಪ್ರಕರಣದ ಕುರಿತು ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಪರಾರಿಯಾಗಿದ್ದ ಗೋಪಾಲ್ ಜೋಷಿ, ಮಹಾರಾಷ್ಟ್ರದ ಕೊಲ್ಲಾಪುರದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ 5.30ಕ್ಕೆ ಲಾಡ್ಜ್ಗೆ ತೆರಳಿ ಬಂಧಿಸಿರುವ ಪೊಲೀಸರು ನೇರವಾಗಿ ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದಾರೆ.
ಸುನೀತಾ ಚೌಹಾಣ್ ಎಂಬುವವರು ನೀಡಿದ ದೂರಿನ ಮೇರೆಗೆ ಗೋಪಾಲ್ ಜೋಷಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಂದು ವಿಚಾರಣೆ ಹಾಜರಾಗುವಂತೆ ಸೂಚನೆ ಹಿನ್ನಲೆ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಗೆ ಸುನೀತಾ ಚೌಹಾಣ್ ಆಗಮಿಸಿದ್ದರು. ಬಳಿಕ ಅವರನ್ನು ಸ್ಥಳ ಮಹಜರಿಗಾಗಿ ಹುಬ್ಬಳ್ಳಿಯ ಇಂದಿರಾ ಕಾಲೋನಿಯಲ್ಲಿರುವ ಗೋಪಾಲ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಎಸಿಪಿ ಚಂದನ್ರೊಂದಿಗೆ ಅಶೋಕನಗರ ಪೊಲೀಸರ ತಂಡದಿಂದ ಗೋಪಾಲ್ ಜೋಷಿ ನಿವಾಸದಲ್ಲಿ ಪಂಚನಾಮೆ ಮಾಡಲಾಗಿದೆ.
ಗೋಪಾಲ ಜೋಷಿ ಬಂಧನವಾಗುತ್ತಿದ್ದಂತೆ ಅವರ ಸಹೋದರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ನನಗೂ ನನ್ನ ಸಹೋದರನ ವಿರುದ್ಧದ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ನಮ್ಮಿಬ್ಬರ ಸಂಬಂಧ ಕಡಿದುಕೊಂಡು ಹಲವು ವರ್ಷಗಳಾಗಿವೆ. ಸಹೋದರ ಗೋಪಾಲ್ ಜೋಷಿ ಜತೆ ಯಾವ ವ್ಯವಹಾರವೂ ಇಲ್ಲ ಎಂದಿದ್ದಾರೆ.ಕಳೆದ 35 ವರ್ಷಗಳಿಂದ ನಾವು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ. ನನಗೆ ದೂರುದಾರರ ಪರಿಚಯವೂ ಇಲ್ಲ ಎಂದು ಹೇಳಿದ್ದಾರೆ. ಗೋಪಾಲ್ ಜೋಷಿ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಲಿ. ಕಾನೂನು ತನ್ನ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಿ ಎಂದು ಸಚಿವ ಜೋಷಿ ಸ್ಪಷ್ಟನೆ ನೀಡಿದ್ದಾರೆ.