ನ್ಯೂಯಾರ್ಕ್: ಪಾಕಿಸ್ತಾನ ಸೇರಿದಂತೆ ವಿಶ್ವದ 12 ದೇಶಗಳಲ್ಲಿ ಜೀವ ಉಳಿಸುವ ಸಿದ್ಧ ಚಿಕಿತ್ಸಕ ಆಹಾರ (ಆರ್‌ಎಟಿಫ್) ಒದಗಿಸುವಲ್ಲಿ ತೀವ್ರ ಹಣಕಾಸಿನ ಕೊರತೆಯಿಂದಾಗಿ ಮಕ್ಕಳು ಸಾವಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಯುನಿಸೆಫ್ ಆತಂಕ ವ್ಯಕ್ತಪಡಿಸಿದೆ. ಈ ಪೈಕಿ ಪಾಕಿಸ್ತಾನವು ಸಿದ್ಧ ಚಿಕಿತ್ಸಕ ಆಹಾರದ ತೀವ್ರ ಕೊರತೆಯನ್ನು ಎದುರಿಸುತ್ತಿದೆ, ಯುನಿಸೆಫ್ ವರದಿಯ ಪ್ರಕಾರ 2025 ರ ಮಧ್ಯದ ವೇಳೆಗೆ ಪಾಕ್ ನ ಆಹಾರ ಸಂಗ್ರಹಣೆ ಖಾಲಿಯಾಗಬಹುದು ಎಂದು ಎಚ್ಚರಿಸಿದೆ.
ಇದಲ್ಲದೇ ಮಾಲಿ, ನೈಜೀರಿಯಾ, ನೈಜರ್ ಮತ್ತು ಚಾಡ್ ದೇಶಗಳು ಈಗಾಗಲೇ ಜೀವ ಉಳಿಸುವ ಸಿದ್ಧ ಚಿಕಿತ್ಸಕ ಆಹಾರದ ಕೊರತೆ ಅನುಭವಿಸುತ್ತಿವೆ ಇದರ ಜತೆಜತೆಗೆ ಕ್ಯಾಮರೂನ್, ಪಾಕಿಸ್ತಾನ, ಸುಡಾನ್, ಮಡಗಾಸ್ಕರ್, ದಕ್ಷಿಣ ಸುಡಾನ್, ಕೀನ್ಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾ 2025 ರ ಮಧ್ಯದ ವೇಳೆಗೆ ಸಿದ್ಧ ಚಿಕಿತ್ಸಕ ಆಹಾರದ ಸ್ಟಾಕ್ ಖಾಲಿಯಾಗಬಹುದು ಎಂದು ಯುನಿಸೆಫ್ ಹೇಳಿದೆ.ಸಂಘರ್ಷ, ಆರ್ಥಿಕ ಆಘಾತಗಳು ಮತ್ತು ಹವಾಮಾನ ಬಿಕ್ಕಟ್ಟಿನಿಂದಾಗಿ ಹಲವಾರು ದೇಶಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಪೌಷ್ಟಿಕತೆಯ ಮಟ್ಟವು ತೀವ್ರವಾಗಿ ಹೆಚ್ಚಾಗಿದೆ ಎಂದು ಯುನಿಸೆಫ್ ಹೇಳಿದೆ.