ಮಂಡ್ಯ : ಮತೀಯವಾದಿಗಳು ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಅಮಾಯಕರ ಹತ್ಯೆಗೆ ಯತ್ನಿಸಿದರೆ ಅಂತಹವರ ಹುಟ್ಟಡಗಿಸಲಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ.
ಅವರು ಬುಧವಾರ ಮಂಡ್ಯದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಶಾಂತಿಯುತ ಸಮಾಜ ನಿರ್ಮಾಣದ ಮೂಲಕ ನಾಗರಿಕರು ಭಯಮುಕ್ತರಾಗಿ ಜೀವನ ನಡೆಸಬೇಕೆನ್ನುವುದು ಸರ್ಕಾರದ ಗುರಿಯಾಗಿದೆ ಎಂದರು.
ಉತ್ತರ ಪ್ರದೇಶದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದೆ. 2024 ರಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಕರ್ನಾಟಕ ಮತ್ತು ಉತ್ತರ ಪ್ರದೇಶದ ಸಂಬಂಧ ತ್ರೇತಯುಗದಿಂದಲೂ ಇದೆ. ತ್ರೇತಯುಗದಲ್ಲಿ ಅಯೋಧ್ಯೆಯ ಶ್ರೀರಾಮಚಂದ್ರನಿಗೆ ಕರ್ನಾಟಕದ ಆಂಜನೇಯ ಸಿಕ್ಕಿದ್ದು, ಜಗತ್ತಿನಲ್ಲೇ ಎಲ್ಲೇ ಹೋದರೂ ರಾಮಮಂದಿರ ಇರುವಲ್ಲಿ, ಆಂಜನೇಯನ ದೇವಸ್ಥಾನವೂ ಇರಲಿದೆ. ನಿಮ್ಮನ್ನು ನೋಡುವ ಭಾಗ್ಯ ಸಿಕ್ಕಿದ್ದು ಖುಷಿ ಕೊಟ್ಟಿದೆ . 2024 ಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಪೂರ್ಣವಾಗಲಿದೆ ಎಂದು ಹೇಳಿದರು.
ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯ, ಕಾಂಗ್ರೆಸ್ ಪಕ್ಷದಿಂದ ಕೇವಲ ತುಷ್ಟಿಕರಣದ ರಾಜಕಾರಣ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶವು ಇಂದು ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಗಲಭೆ ನಡೆದಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ರೌಡಿಗಳನ್ನು ಮಟ್ಟ ಹಾಕಲಾಗಿದೆ. ರೌಡಿಗಳು ಬಾಲ ಬಿಚ್ಚಿದ್ರೆ ಆಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ. ದೇಶವಿರೋಧಿ ಚಟುವಟಿಕೆಗಳನ್ನು ನಡೆಸಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸುವವರನ್ನು ನಿರ್ದಯವಾಗಿ ಮಟ್ಟ ಹಾಕಲಾಗುತ್ತದೆ ಎಂದು ಗುಡುಗಿದರು.