Share this news

ಬೆಂಗಳೂರು : ತಿರುಪತಿ ತುಪ್ಪ ವಿವಾದದ ಬಳಿಕ ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಂದಿನಿ ತುಪ್ಪ ಹೊರತುಪಡಿಸಿ ಉಳಿದ ತುಪ್ಪಗಳ ಮಾದರಿ ಪರೀಕ್ಷೆ ನಡೆಸುತ್ತಿದ್ದು, ಈವರೆಗೆ 230 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 224 ಮಾದರಿಗಳು ಸುರಕ್ಷಿತವಾಗಿವೆ ಎಂಬುದು ಪರೀಕ್ಷೆಯಲ್ಲಿ ದೃಢವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ತಿರುಪತಿಯ ಲಡ್ಡುವಿಗೆ ಬಳಸಿರುವ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನಂಶ ಬಳಕೆಯಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಭ್ಯವಿರುವ ಪತಂಜಲಿ ಸೇರಿದಂತೆ 230 ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಿದ್ದು, ಯಾವುದರಲ್ಲೂ ದನದ ಕೊಬ್ಬಿನಂಶ ಪತ್ತೆಯಾಗಿಲ್ಲ . ಐದು ಸ್ಯಾಂಪಲ್ ಗಳು ಅಸುರಕ್ಷಿತ ಎಂದು ಕಂಡುಬಂದಿದ್ದು ಒಂದು ಸ್ಯಾಂಪಲ್ ಮಾತ್ರ ಕಳಪೆ ಗುಣಮಟ್ಟದ್ದಾಗಿದೆ . ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. 

ರಾಜ್ಯಾದ್ಯಂತ ರೈಲ್ವೆ ನಿಲ್ದಾಣದಲ್ಲಿರುವ ಆಹಾರ ಮಳಿಗೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದರ ಕುರಿತು ಖಚಿತಪಡಿಸಿಕೊಳ್ಳಲು ವಿಶೇಷ ಆಂದೋಲನವನ್ನು ಕೈಗೊಳ್ಳುವ ಮೂಲಕ  ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ 142 ಆಹಾರ ಮಳಿಗೆಗಳನ್ನು ತಪಾಸಣೆ ಮಾಡಲಾಗಿದ್ದು, ಕಂಡು ಬಂದಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಹಾಗೂ  ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಪ್ರಮುಖ ಪ್ರವಾಸಿ, ತಾಣಗಳಲ್ಲಿ ಸ್ಥಾಪಿಸಿರುವ 35 ಹೋಟೆಲ್ ಘಟಕಗಳಲ್ಲಿ ಗ್ರಾಹಕರುಗಳಿಗೆ ಸರಬರಾಜು ‘ಮಾಡಲಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

 

 

 

Leave a Reply

Your email address will not be published. Required fields are marked *