ನವದೆಹಲಿ: : ಸುಮಾರು 17 ವರ್ಷಗಳ ಬಳಿಕ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆ. ಈ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾಗೆ ಅಮೆರಿಕದಲ್ಲಿನ ಕಾನೂನು ಹೋರಾಟ ಅಂತ್ಯವಾಗಿದೆ. ದಶಕಗಳ ಕಾಲ ಅಮೆರಿಕದಲ್ಲಿ ನಡೆದ ಕಾನೂನು ಹೋರಾಟದಲ್ಲಿ ಭಾರತಕ್ಕೆ ದೊಡ್ಡ ಜಯ ಸಿಕ್ಕಿದ್ದು, ಅಮೆರಿಕದಿಂದ ರಾಣಾನನ್ನು ಗಡಿಪಾರು ಮಾಡಲಾಗಿದೆ. ರಾಣಾನನ್ನು ಭಾರತಕ್ಕೆ ವಿಶೇಷ ವಿಮಾನದಲ್ಲಿ ಕರೆದುಕೊಂಡು ಬರಲಾಗುತ್ತಿದೆ. ಭಾರತದಲ್ಲಿ ರಾಣಾ ವಿಚಾರಣೆಯಿಂದ ದಾಳಿಯಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡ ಹಾಗೂ ಸಂಚು ಬಯಲಾಗಲಿದ್ದು, ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ನ್ಯಾಯ ಸಿಗುವ ಸಾಧ್ಯತೆ ಇದೆ. ಜೊತೆಗೆ ಕ್ರಾಸ್ ಬಾರ್ಡರ್ ಟೆರರಿಸಂಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪಾಕಿಸ್ತಾನವನ್ನು ವಿಶ್ವದ ಮುಂದೆ ಮತ್ತೊಂದು ಬಾರಿ ಬೆತ್ತಲು ಮಾಡಲು ಭಾರತಕ್ಕೆ ಅವಕಾಶ ಸಿಕ್ಕಿದೆ.
2008ರ ನವೆಂಬರ್ 26ರಂದು ಮುಂಬೈ ಮೇಲೆ ಉಗ್ರರ ದಾಳಿ ನಡೆದಿತ್ತು. ಅದರ ಪ್ರಮುಖ ಆರೋಪಿ ತಹವ್ವುರ್ ರಾಣಾನನ್ನು ನಿರಂತರ ಕಾನೂನು ಹೋರಾಟದ ಬಳಿಕ ಅಮೆರಿಕದಿಂದ ಭಾರತಕ್ಕೆ ಕರೆದುಕೊಂಡು ಬರಲಾಗುತ್ತಿದೆ. ರಾಣಾ ಭಾರತಕ್ಕೆ ಬಂದ ಬಳಿಕ ಕೆಲವು ವಾರಗಳ ಕಾಲ ಎನ್ಐಎ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ. ರಾಣಾ ಗಡಿಪಾರು ಕಾರ್ಯಗಳ ಮೇಲೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿಗಾ ಇಟ್ಟಿದ್ದು, ಗೃಹ ಸಚಿವಾಲಯ ಹಾಗೂ ಎನ್ಐಎ ಅಧಿಕಾರಿಗಳು ರಾಣಾ ಗಡಿಪಾರು ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್ನಲ್ಲಿರುವ ರಾಣಾನನ್ನು ಮುಂಬೈ ಅಥವಾ ದಿಲ್ಲಿಯ ಜೈಲುಗಳಲ್ಲಿ ಇಡುವ ಸಾಧ್ಯತೆ ಇದ್ದು, ಜೈಲಿನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭಾರತ ಸರ್ಕಾರವೂ ನಿರಂತರವಾಗಿ ರಾಣಾನನ್ನು ಭಾರತಕ್ಕೆ ಕರೆತರುವ ಪ್ರಯತ್ನವನ್ನು ಮಾಡುತ್ತಿತ್ತು. ಇದರ ಫಲವಾಗಿ ಅಮೆರಿಕದ ಟ್ರಂಪ್ ಸರ್ಕಾರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುತ್ತಿದೆ. ಈಗಾಗಲೇ ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ರಾಣಾ ವಶಕ್ಕೆ ಪಡೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ
2009ರಲ್ಲಿಯೇ ಅರೆಸ್ಟ್ ಆಗಿದ್ದ !
ಮುಂಬೈ ದಾಳಿ ಬಳಿಕ 2009ರಲ್ಲಿ ಅಮೆರಿಕದ ಎಫ್ಬಿಐ ರಾಣಾನನ್ನು ಚಿಕಾಗೋದಲ್ಲಿ ಬಂಧಿಸಿತ್ತು. ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ರಾಣಾ ಸಂಪರ್ಕ ಹೊಂದಿದ್ದ. ಡೇವಿಡ್ ಹೆಡ್ಲಿಯನ್ನು ದಾವೂದ್ ಗಿಲಾನಿ ಅಂತಲೂ ಕರೆಯಲಾಗುತ್ತೆ. ಮುಂಬೈ ಮೇಲೆ ದಾಳಿ ನಡೆಸಲು ಪಾಕ್ ಉಗ್ರ ಸಂಘಟನೆ ಲಷ್ಕರೆ ತೊಯ್ಬಾಗೆ ಸಹಾಯ ಮಾಡಿದ್ದ ಎಂಬ ಆರೋಪ ಡೇವಿಡ್ ಹೆಡ್ಲಿ ಮೇಲಿದ್ದು, ಇದೇ ಕೇಸ್ನಲ್ಲಿ ಪೊಲೀಸರಿಗೆ ಹೆಡ್ಲಿ ಶರಣಾಗಿದ್ದ. ಇದರಿಂದ ಹೆಡ್ಲಿ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಲಷ್ಕರ್-ಎ-ತೊಯ್ಬಾದ ಸಕ್ರಿಯ ಸದಸ್ಯಬಾಗಿದ್ದ ತಹವ್ವುರ್ ರಾಣಾ ಡೇವಿಡ್ ಹೆಡ್ಲಿ ಎಂಬಾತನಿಗೆ ಭಾರತದಲ್ಲಿ ದಾಳಿ ನಡೆಸಲು ಪಾಸ್ಪೋರ್ಟ್ ವ್ಯವಸ್ಥೆ ಮಾಡಿದ್ದ ಎಂದು ತಿಳಿದುಬಂದಿದೆ. ಡೇವಿಡ್ ಹೆಡ್ಲಿ ದಾಳಿಯ ಟಾರ್ಗೆಟ್ಗಳನ್ನು ಫೈನಲ್ ಮಾಡಿ ಉಗ್ರರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಲಷ್ಕರ್ ಈ ತೊಯ್ಬಾ ಸಂಘಟನೆಯಲ್ಲಿ ಸಕ್ರಿಯ ಸದಸ್ಯನಾಗಿದ್ದ ತಹವ್ವುರ್ ರಾಣಾ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ. ರಾಣಾ ಮತ್ತು ಡೇವಿಡ್ ಹೆಡ್ಲಿ ಮುಂಬೈ ದಾಳಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಇವರಿಬ್ಬರು ಪಾಕಿಸ್ತಾನದಲ್ಲಿ ಒಂದೇ ಶಾಲೆಯಲ್ಲಿ ಓದಿದ್ದು, ಬಾಲ್ಯ ಸ್ನೇಹಿತರಾಗಿದ್ದರು. ಮುಂಬೈ ದಾಳಿ ನಡೆಸಲು ಹೆಡ್ಲಿ ರಾಣಾನಿಂದ ಅನುಮತಿ ಪಡೆದಿದ್ದ. ರಾಣಾ ಚಿಕಾಗೋದಲ್ಲಿ ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್ ಎಂಬ ಕಂಪೆನಿಯನ್ನು ಹೊಂದಿದ್ದ. ಮುಂಬಯಿಯಲ್ಲಿ ಫಸ್ಟ್ ವರ್ಲ್ಡ್ ಕಚೇರಿಯನ್ನು ತೆರೆದು ತನ್ನ ಚಟುವಟಿಕೆಗಳನ್ನು ಮುಂದುವರಿಸಲು ಹೆಡ್ಲಿಗೆ ಅನುಮತಿ ನೀಡಿದ್ದ. 2006ರಲ್ಲಿ ಹೆಡ್ಲಿ ಮುಂಬೈನಲ್ಲಿ ಎಲ್ಇಟಿ ಕಚೇರಿಯನ್ನು ತೆರೆಯಲು ಕೂಡ ಪ್ಲಾನ್ ಮಾಡಿದ್ದ. ಅದಾ ಬಳಿಕ ಹೆಡ್ಲಿ 2007 ಮತ್ತು 2008ರ ನಡುವೆ ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದ. ಮುಂಬೈ ದಾಳಿಗಾಗಿ ಆತ ಸ್ಥಳಗಳ ಪರಿಶೀಲನೆ ನಡೆಸಿ ಟಾರ್ಗೆಟ್ ಫೈನಲ್ ಮಾಡಿದ್ದ. ಹೆಡ್ಲಿಗೆ ರಾಣಾ ವೀಸಾ ಪಡೆಯಲು ಕೂಡ ಸಹಾಯ ಮಾಡಿದ್ದ.
26/11 ದಾಳಿಗೂ ಮುನ್ನ ಮುಂಬೈನಲ್ಲಿದ್ದ ರಾಣಾ!
ಇವರಿಬ್ಬರಿಗೆ ಐಎಸ್ಐ ಮೇಜರ್ ಇಕ್ಬಾಲ್ ಸಂಪರ್ಕ ಕೂಡ ಇತ್ತು. ದಾಳಿಯ ಮುನ್ನ ರಾಣಾ ದುಬೈ ಮೂಲಕ ಮುಂಬೈಗೆ ಬಂದಿದ್ದು, 2008ರ ನವೆಂಬರ್ 11 ರಿಂದ 21ರವರೆಗೆ ಮುಂಬೈನ್ ಪವೈನ್ ರೆನೆಸಾನ್ಸ್ ಹೋಟೆಲ್ನಲ್ಲಿ ತಂಗಿದ್ದ. ಈ ವೇಳೆ ದಾಳಿಯ ಸಿದ್ಧತೆಯನ್ನು ಆತ ಖಚಿತಪಡಿಸಿಕೊಂಡಿದ್ದ. ರಾಣಾ ಮುಂಬೈನಿಂದ ತೆರಳಿದ ಐದು ದಿನಗಳ ಬಳಿಕ ದಾಳಿ ಸಂಭವಿಸಿತ್ತು. ನವೆಂಬರ್ 26ರಂದು ಮುಂಬೈನಲ್ಲಿ ಲಷ್ಕರೆ ತೊಯ್ಬಾದ 10 ಉಗ್ರರು ಸರಣಿ ದಾಳಿಯನ್ನು ನಡೆಸಿದ್ದರು. ತಾಜ್ ಹೋಟೆಲ್, ಛತ್ರಪತಿ ಶಿವಾಜಿ ರೈಲ್ವೇ ಟರ್ಮಿನಲ್ ಸೇರಿ 12 ಕಡೆ ಭಯೋತ್ಪಾದಕ ದಾಳಿ ನಡೆಸಿದ್ದರು. ಸುಮಾರು 60 ಗಂಟೆ ನಡೆದ ದಾಳಿಯಲ್ಲಿ 166 ಅಮಾಯಕರು ಸಾವನ್ನಪ್ಪಿದ್ದರು. ಭದ್ರತಾ ಪಡೆಗಳು 9 ಮಂದಿ ಉಗ್ರರನ್ನು ಹೊಡೆದುರುಳಿಸಿದ್ದವು. ಜೀವಂತವಾಗಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ಅನ್ನು 2012ರಲ್ಲಿ ಗಲ್ಲಿಗೇರಿಸಲಾಗಿತ್ತು. ದಾಳಿಯಲ್ಲಿ ಆದ ಸಾವುಗಳ ಬಗ್ಗೆ ರಾಣಾ ಸಂತೋಷ ವ್ಯಕ್ತಪಡಿಸಿದ್ದ. ಅಲ್ಲದೇ, ದಾಳಿಯಲ್ಲಿ ಭಾಗಿಯಾದವರಿಗೆ ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಗೌರವ ನೀಡಬೇಕೆಂದು ಕೂಡ ಹೇಳಿದ್ದ.
ಭಾರತಕ್ಕೆ ಬರಬಾರದು ಎಂದು ರಾಣಾ ಬಹಳ ಪ್ರಯತ್ನ ಪಟ್ಟಿದ್ದ. ಭಾರತಕ್ಕೆ ಗಡಿಪಾರು ಮಾಡದಂತೆ ಅಮೆರಿಕದ ಸುಪ್ರೀಂ ಕೋರ್ಟ್ನಲ್ಲಿ ರಾಣಾ ಮನವಿ ಸಲ್ಲಿಸಿದ್ದ. ಅಮೆರಿಕದಲ್ಲಿಯೇ ಉಳಿಯಲು ಅದು ರಾಣಾಗೆ ಕೊನೆ ಅವಕಾಶವಾಗಿತ್ತು. ಆದರೆ, ಅಮೆರಿಕದ ಸುಪ್ರೀಂ ಕೋರ್ಟ್ ರಾಣಾ ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿತ್ತು. ಈಗ ರಾಣಾನನ್ನು ಭಾರತಕ್ಕೆ ಕರೆದುಕೊಂಡು ಬರಲಾಗುತ್ತಿದ್ದು, ಮುಂಬೈ ದಾಳಿಯ ಹಿಂದಿನ ಸಂಚು ಬಯಲಾಗುವ ನಿರೀಕ್ಷೆ ಇದ್ದು, ಮುಂಬೈ ದಾಳಿಯ ಸಂಚುಕೋರನ ಅಂತ್ಯ ಭಾರತದಲ್ಲೇ ಆಗಲಿದ್ದು, ದಾಳಿಯಲ್ಲಿ ಸಾವನ್ನಪ್ಪಿದವರಿಗೆ ನ್ಯಾಯ ಸಿಗಲಿದೆ.