Share this news

ಬೆಂಗಳೂರು : ಚೈತ್ರಾ ಕುಂದಾಪುರ ಗ್ಯಾಂಗ್​ನಿಂದ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಅಭಿನವ ಹಾಲಶ್ರೀಯನ್ನು ಕೋರ್ಟ್ 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ. ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ, ಮಹಜರು ಪ್ರಕ್ರಿಯೆ ನಡೆಸಬೇಕಿರುವುದರಿಂದ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಸಿಸಿಬಿ, ನ್ಯಾಯಾಧೀಶರ ಮುಂದೆ ಮನವಿ ಮಾಡಿದೆ. ಸಿಸಿಬಿಯ ಈ ಮನವಿ ಪುರಸ್ಕರಿಸಿದ ಕೋರ್ಟ್, ಆರೋಪಿಯನ್ನು ಸೆಪ್ಟೆಂಬರ್ 29ರ ವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಹಾಲಶ್ರೀ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಕಾಯ್ದಿರಿಸಿದೆ.ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಎನ್ನುವರಿಗೆ ಕೋಟ್ಯಂತರ ರೂ. ವಂಚನೆ ಪ್ರಕರಣದಲ್ಲಿ ಈಗಾಗಲೇ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಬಂಧನವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ಇನ್ನು ಇಷ್ಟು ದಿನ ತಲೆಮರೆಸಿಕೊಂಡಿದ್ದ ಪ್ರಕರಣದ ಮೂರನೇ ಆರೋಪಿ ಹಾಲಶ್ರೀಯನ್ನು ನಿನ್ನೆ (ಸೆಪ್ಟೆಂಬರ್ 19) ಒಡಿಶಾದ ಕಟಕ್​ನಲ್ಲಿ ಬಂಧಿಸಲಾಗಿತ್ತು.

ಹಾಲಶ್ರೀ ಸ್ವಾಮೀಜಿ ಸಿಕ್ಕಿಬೀಳಲಿ ಎಲ್ಲಾ ಹೊರಬೀಳುತ್ತೆ ಎಂದು ಚೈತ್ರಾ ಬಾಂಬ್​ ಹಾಕಿದ್ದಳು. ಅದರಂತೆ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದ ಹಾಲಶ್ರೀ ಕೊನೆಗೂ ಸಿಸಿಬಿ ಖೆಡ್ಡಾಗೆ ಬಿದ್ದಿದ್ದಾನೆ. ಹೀಗಾಗಿ ಇಬ್ಬರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ತೀವ್ರಗೊಳಿಸಲಿದ್ದಾರೆ. ಸಮಯ ಬಂದರೆ ಚೈತ್ರಾ ಹಾಗೂ ಹಾಲಶ್ರೀಯನ್ನು ಮುಖಾಮುಖಿ ಕೂಡಿಸಿಕೊಂಡು ವಿಚಾರಣೆ ಮಾಡುವ ಸಾಧ್ಯತೆಗಳಿವೆ.

ಒಡಿಶಾದಲ್ಲಿ ಸಿಕ್ಕಿಬಿದ್ದ ಸ್ವಾಮೀಜಿ:
ಒಡಿಶಾದಲ್ಲಿ ರೈಲಿನಲ್ಲಿ ಓಡಾಡುತ್ತಿದ್ದ ಸ್ವಾಮೀಜಿಯನ್ನು ಸಿಸಿಬಿ ಲಾಕ್ ಮಾಡಿ ನಿನ್ನೆ(ಸೆಪ್ಟೆಂಬರ್ 19) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದು ನಂತರ ನೇರವಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಯ್ತು. ಇದಾದ ಬಳಿಕ ಬೆಂಗಳೂರಿನ ಹೊರವಲಯದಲ್ಲಿ 5-6 ಕಡೆ ಸ್ಥಳ ಮಹಜರು ನಡೆಸಲಾಗಿದೆ ಎನ್ನಲಾಗಿದೆ. ಇದೀಗ ಕೋರ್ಟ್ ಸಹ ಹಾಲಶ್ರೀಯನ್ನು ಸಿಸಿಬಿ ಕಸ್ಟಡಿಗೆ ನೀಡಿದ್ದು, ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.

 

Leave a Reply

Your email address will not be published. Required fields are marked *